ಕೆರೆ ಸಮ್ಮೇಳನ 2014: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೌಗುಭೂಮಿ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆಯ ಕುರಿತು
ದಿನಾಂಕ: 13-15 ನವೆಂಬರ್, 2014
ಮುನ್ನುಡಿ

ಶಕ್ತಿ ಮತ್ತು ಜೌಗುಭೂಮಿ ಸಂಶೋಧನಾ ತಂಡ, ಪರಿಸರ ವಿಜ್ಞಾನ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆಯಿಂದ ಆರಂಭಗೊಂಡ, ಕೆರೆಯ ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆಯ ಕುರಿತಾದ ಚರ್ಚೆ ಕಾಲಾಂತರದಲ್ಲಿ "ಕೆರೆ ಸಮ್ಮೇಳನ" ಎಂದೇ ಪ್ರಸಿದ್ಧಿಯಾಯಿತು. ಮೊಟ್ಟ ಮೊದಲ "ಕೆರೆ ಸಮ್ಮೇಳನ" 1998ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಯಿತು. ನಂತರದಲ್ಲಿ (2000 ದಿಂದ), ವಿವಿಧ ಶೈಕ್ಷಣಿಕ, ಸರ್ಕಾರಿ ಮತ್ತು ಸರ್ಕಾರೇತರ ಸಂಘ-ಸಂಸ್ಥೆಗಳಿಗೂ ಈ ಸಮ್ಮೇಳನದಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಯಿತು. ಕೆರೆ ಸಮ್ಮೇಳನದ ಮೂಲ ಉದ್ದೇಶವಾದ ಪರಿಸರ ಸಂರಕ್ಷಣೆ, ಪುನರುಜ್ಜೀವನ ಮತ್ತು ನಿರ್ವಹಣೆಯ ಮುಖ್ಯ ಕಳಕಳಿ ಜಲವಿಜ್ಞಾನ, ಭೂವಿಜ್ಞಾನ, ಸಾರ್ವಜನಿಕ ಭಾಗವಹಿಸುವಿಕೆ, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಪಾತ್ರ ಹಾಗೂ ಭವಿಷ್ಯದ ಸಂಶೋಧನಾ ಅಗತ್ಯಗಳನ್ನು ಪ್ರಚೋದಿಸುವುದಾಗಿದೆ. ಕೆರೆ ಸಮ್ಮೇಳನ 2014, ಇದು 9ನೇ ದ್ವೈವಾರ್ಷಿಕ ಸಮ್ಮೇಳನವಾಗಿದ್ದು, "ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೌಗುಭೂಮಿ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆ" ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ಜಾಗತಿಕ ಜೌಗುಭೂಮಿ ದಿನ 2014ರ ವಸ್ತು, "ಜೌಗುಭೂಮಿ ಮತ್ತು ವ್ಯವಸಾಯ: ಸಂಯೋಜಿತ ಫಲಿತಾಂಶಕ್ಕಾಗಿ ಜೌಗುಭೂಮಿ ಮತ್ತು ವ್ಯವಸಾಯ ಕ್ಷೇತ್ರಗಳ (ನೀರಿನ ಮೂಲಗಳನ್ನು ಒಳಗೊಂಡು) ಒಟ್ಟುಗೂಡುವಿಕೆಯ ಅವಶ್ಯಕತೆಗಳು" ಎಂಬುದಾಗಿದ್ದು, ಪ್ರಸ್ತುತ ಸಮ್ಮೇಳನವು ಆಹಾರ ಉತ್ಪಾದನೆಯಲ್ಲಿ ಜೌಗುಭೂಮಿಯ ಪ್ರಾಮುಖ್ಯವನ್ನು ಅರಿತುಕೊಳ್ಳಲು ಮತ್ತು ಇಂತಹ ಸೂಕ್ಷ್ಮ ಪರಿಸರ ವ್ಯವಸ್ಥೆಯು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಲು ಮುಕ್ತ ವೇದಿಕೆಯನ್ನು ಒದಗಿಸುತ್ತದೆ.

ಕೆರೆಗಳು ಜೀವ-ವೈವಿಧ್ಯತೆಯ ತೊಟ್ಟಿಲಾಗಿದ್ದು, ಅಸಂಖ್ಯ ಜಲ ಹಾಗೂ ಭೂ ಜೀವಿಗಳ ಉಳಿವಿಗೆ ಅತ್ಯವಶ್ಯಕವಾದ ನೀರು ಮತ್ತು ಆಹಾರವನ್ನು ಒದಗಿಸುತ್ತವೆ. ಇಂತಹ ಪರಿಶುದ್ಧ ಪರಿಸರ ವ್ಯವಸ್ಥೆಯು, ಭೂ ಕವಚದಲ್ಲಾಗುವ ಬದಲಾವಣೆ, ಅರಣ್ಯ ನಾಶ, ಜೀವಿಗಳ ವಾಸಸ್ಥಾನದ ಛಿದ್ರಗೊಳ್ಳುವಿಕೆ, ಪರಿಸರ ಮಾಲಿನ್ಯ, ಅವ್ಯವಸ್ಥಿತ ತ್ಯಾಜ್ಯ ವಿಲೇವಾರಿ (ಘನ ಮತ್ತು ದ್ರವ) ಹಾಗು ಆರ್ಥಿಕ ಉತ್ಪಾದನೆ ಮತ್ತು ಪರಿಸರೀಯ ಭದ್ರತೆಗೆ ಸಂಬಂಧಿಸಿದ ಘಟನೆಗಳಿಂದ ಅವನತಿಯ ಅಂಚಿಗೆ ಸರಿಯುತ್ತಿದೆ. ಭೂ ಕವಚದಲ್ಲಾಗುವ ಬದಲಾವಣೆಗಳು ಕೆರೆಗಳ ರಚನಾತ್ಮಕ ಮಾರ್ಪಾಡಿಗೆ ಕಾರಣವಾಗುತ್ತವೆ ಮತ್ತು ಇವು ಜಲ ಹರಿವು, ಭೂ ಹಾಗೂ ಜೀವ ರಾಸಾಯನಿಕ ಮತ್ತು ಪೋಷಕಾಂಶ ಚಕ್ರಗಳ ಮೇಲೆ ವ್ಯತಿರೀಕ್ತ ಪರಿಣಾಮವನ್ನುಂಟು ಮಾಡುತ್ತವೆ. ಈ ಎಲ್ಲ ಬದಲಾವಣೆಗಳಿಂದ, ವರ್ಷವಿಡೀ ಹರಿಯುತ್ತಿದ್ದ ಪುರಾತನ ಝರಿ-ತೊರೆಗಳು ಕಣ್ಮರೆಯಾಗುತ್ತಿದ್ದು ಮ(ಳೆ)ಲೆನಾಡಿನಲ್ಲಿ ಮುಂಬರುವ ಜಲಕ್ಷಾಮದ ಭೀಕರತೆಯನ್ನು ಸೂಚಿಸುತ್ತಿದೆ. ಪರಿಸರದಲ್ಲಾಗುತ್ತಿರುವ ಬದಲಾವಣೆಗಳಿಂದ ಜೀವ-ವೈವಿಧ್ಯತೆಯ ಮೇಲಾಗುತ್ತಿರುವ ದುಷ್ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದಕ್ಕೆ ಜಗತ್ತಿನಾದ್ಯಂತ ಪುರಾವೆ ದೊರೆಯುತ್ತಿದೆ. ಹವಾಮಾನದ ಬದಲಾವಣೆ ಹಾಗೂ ಹಿಮ ಪ್ರದೇಶಗಳ ಕರಗುವಿಕೆಗಳು ಜಲ ಹರಿವಿನಲ್ಲಾಗುವ ಏರುಪೇರುಗಳಿಗೆ ಪ್ರಮುಖ ಕಾರಣ ಮತ್ತು ಇದು ಪ್ರವಾಹ ಅಥವಾ ಬರಗಾಲಕ್ಕೆ ಕಾರಣವಾಗಬಹುದು. ಜಲ ಹರಿವಿನಲ್ಲಾಗುವ ಬಹುತೇಕ ಬದಲಾವಣೆಗಳು ಸಿಹಿನೀರಿನ ಪರಿಸರದಲ್ಲಿ ಅಥವಾ ಜೌಗು ಭೂಪ್ರದೇಶದಲ್ಲಿ ಬಿಂಬಿತವಾಗುತ್ತವೆ. ಪ್ರಮುಖ ಜೈವಿಕ ಪರಿಣಾಮಗಳೆಂದರೆ ಜೀವ-ವೈವಿಧ್ಯತೆಯಲ್ಲಿ ಇಳಿಮುಖ, ಆವಾಸಗಳಿಗೆ ಹಾನಿ, ಜಲಚರಗಳ ಸಂತಾನೋತ್ಪತ್ತಿ ಪ್ರದೇಶಗಳ ನಾಶ, ಒಳನಾಡು ಮತ್ಸ್ಯ ಸಂಪನ್ಮೂಲಗಳಲ್ಲಿ ಇಳಿಕೆಮತ್ತು ವಿವಿಧ ಸಸ್ಯ ವರ್ಗಗಳ ನಾಶ. ಸುಸ್ಥಿರ ನಿರ್ವಹಣೆ ಮತ್ತು ಪರಿಸರ ಪೂರಕ ಅಭಿವೃದ್ಧಿ ಯೋಜನೆಗಳಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡುವುದೊಂದೇ ನಮ್ಮ ಭದ್ರ ಭವಿಷ್ಯದ ಕೀಲಿಕೈ. ಜಲ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸುವ ಕ್ರೀಯಾ ಯೋಜನೆಯ ರಚನೆ ಮತ್ತು ಅನುಷ್ಠಾನಕ್ಕೆ, ಅದಕ್ಕಿರುವ ಸಮಸ್ಯೆಗಳು ಹಾಗೂ ಸೂಕ್ತ ಪರಿಹಾರಗಳನ್ನು ಅರ್ಥೈಸಿಕೊಳ್ಳುವುದು ಅತ್ಯವಶ್ಯ. ಈ ನಿಟ್ಟಿನಲ್ಲಿ ಕ್ರಮಗಳೆಂದರೆ:

  • ಎಲ್ಲಾ ಪಾಲುದಾರರನ್ನೂ, ಜಲಮೂಲಗಳ ಅಭಿವೃದ್ಧಿ/ಸಂರಕ್ಷಣೆ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ಹಾಗೂ ಪ್ರತಿ ವ್ಯಕ್ತಿ/ಸಂಸ್ಥೆಯು ಭಾಗವಹಿಸುವಂತೆ ನೋಡಿಕೊಳ್ಳುವುದು
  • ಅಂತರಾಜ್ಯ ಯೋಜನೆಗಳನ್ನು ಸ್ಥಳೀಯ ಸಮುದಾಯ ಅಥವಾ ಸರಕಾರೇತರ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಆರಂಭಿಸುವಂತೆ ಪ್ರೋತ್ಸಾಹಿಸುವುದು.
  • ಹೆಚ್ಚಿನ ನೈಸರ್ಗಿಕ, ಆರ್ಥಿಕ, ಪ್ರದರ್ಶನಾತ್ಮಕ ಮತ್ತು ಮನೋರಂಜನಾ ಮೌಲ್ಯಗಳನ್ನು ಹೊಂದಿರುವ ಜಲ ಸಂಪನ್ಮೂಲಗಳನ್ನು ಗುರುತಿಸುವುದು.
  • ಜಲ ಮೂಲಗಳಿಗೆ ಆಗಬಹುದಾದ ಸಂಭವನೀಯ ಹಾನಿಗಳನ್ನು ಮುಂಚಿತವಾಗಿ ಗುರುತಿಸಿ ವಿಶ್ಲೇಷಿಸುವುದು.
  • ಜಲ ಮತ್ತು ಭೂ ಸಂಪನ್ಮೂಲಗಳ ಪುನರುಜ್ಜೀವನ, ನಿರ್ವಹಣೆ ಹಾಗೂ ಮೌಲ್ಯ ವರ್ಧನೆಗೆ ಪೂರಕವಾದ ನೀತಿ ಮತ್ತು ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸುವುದು.