http://www.iisc.ernet.in/
ಸೌರ ಶಕ್ತಿ – ಕರ್ನಾಟಕ ರಾಜ್ಯಕ್ಕೆ ಸುಸ್ಥಿರ ಇಂಧನ
http://wgbis.ces.iisc.ernet.in/energy/
1ಇಂಧನ ಮತ್ತು ಜೌಗುಭೂಮಿ ಸಂಶೋಧನಾ ವಿಭಾಗ (EWRG), ಪರಿಸರ ವಿಜ್ಞಾನ ಕೇಂದ್ರ [CES],
2ಸುಸ್ಥಿರ ತಂತ್ರಜ್ಞಾನ ಕೇಂದ್ರ (astra), 3ಮೂಲಭೂತ ಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನಾ ಕೇಂದ್ರ [CiSTUP],
ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು, ಕರ್ನಾಟಕ, 560 012, ಭಾರತ.
*ಮಿಂಚಂಚೆ: cestvr@ces.iisc.ernet.in

21 ನೇ ಶತಮಾನದಲ್ಲಿ ಸುಸ್ಥಿರ ವಿದ್ಯುಚ್ಛಕ್ತಿಗಾಗಿ ಶಿಫಾರಸುಗಳು

ಬೆಳೆಯುತ್ತಿರುವ ಬೇಡಿಕೆಗಳನ್ನು ಈಡೇರಿಸಲು ಸೌರಶಕ್ತಿ ಆಧಾರಿತ ಉತ್ಪಾದನೆ ಭರವಸೆದಾಯಕವೂ ಪರಿಸರ-ಸ್ನೇಹಿ ವಿಧಾನವೂ ಆಗಿದೆ. ಭಾರತವು ಒಳ್ಳೆಯ ಸೌರಸಾಮರ್ಥ್ಯ ಹೊಂದಿದ್ದು ಈ ಸಾಮರ್ಥ್ಯವನ್ನು ಬಳಸಿಕೊಂಡಲ್ಲಿ ಪಳಿಯುಳಿಕೆ ಆಧಾರಿತ ಇಂಧನಗಳೊಂದಿಗೆ ಇರುವ ಪರಿಸರ ಮಾರಕ ಅಂಶಗಳನ್ನು ಕಡಿಮೆಗೊಳಿಸಬಹುದು. ಸೌರ ಎಸ್‍ಪಿವಿ ತಂತ್ರಜ್ಞಾನವು ವಿಕೇಂದ್ರೀಕರಣ ಹಾದಿಯಲ್ಲಿ ಗೃಹ ಮತ್ತು ನೀರಾವರಿ ಬೇಡಿಕೆಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಕೇಂದ್ರೀಕೃತ ಸೌರವಿದ್ಯುತ್ ಘಟಕಗಳನ್ನು ಸ್ಥಾಪನೆಯು ಸ್ಥಳೀಯ ಕೈಗಾರೀಕರಣಕ್ಕೆ ನೆರವಾಗಲಿದ್ದು, ಅಗಾಧ ಪ್ರಮಾಣದ ಯುವಜನತೆಗೆ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವುದರಿಂದ ಸರ್ವತೋಮುಖ ಅಭಿವೃದ್ಧಿಗೆ ಬುನಾದಿಯಾಗುತ್ತದೆ. ಮಹಾತ್ಮ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ ಪರಿಕಲ್ಪನೆಯನ್ನು ನನಸು ಮಾಡುವುದಲ್ಲದೆ, ವಿಪುಲವಾಗಿ ಲಭ್ಯವಿರುವ ಯುವಶಕ್ತಿ ಮತ್ತು ಸೌರಶಕ್ತಿಯನ್ನು ಬಳಸಿಕೊಂಡು ಪ್ರದೇಶವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯುತ್ತದೆ. ಸೂಕ್ತ ರೀತಿಯ ಪ್ರೋತ್ಸಾಹಕರ ನೀತಿಯು ಮನೆಗಳಲ್ಲಿ ಬೃಹತ್ ರೀತಿಯಲ್ಲಿ ಸೌರ ಉಪಕರಣಗಳನ್ನು ಅಳವಡಿಸಲು ಸಹಕಾರಿಯಾಗಬಲ್ಲುದು. ವಿದ್ಯುಚ್ಛಕ್ತಿ ಬೇಡಿಕೆ ಪೂರೈಸುವಲ್ಲಿ ದೀರ್ಘಕಾಲದಲ್ಲಿ ಸಹಕಾರಿಯಾಗುವ ಅತಿ ಸಣ್ಣ ಗ್ರಿಡ್ (ಮೈಕ್ರೋಗ್ರಿಡ್, Micro grid) ಮತ್ತು ಸ್ಮಾರ್ಟ್ ಗ್ರಿಡ್ ವಿನ್ಯಾಸಗಳನ್ನು ಒಳಗೊಂಡ ವಿದ್ಯುತ್ ಉಳಿತಾಯ ಮಾಡುವ, ವಿಕೇಂದ್ರೀಕೃತ ವಿದ್ಯುಚ್ಛಕ್ತಿ ಉತ್ಪಾದನಾ ತಂತ್ರಜ್ಞಾನಗಳಿಗೆ ಮೇಲೆ ಗಮನ ಹರಿಸುವ ಅವಶ್ಯಕತೆಯಿದೆ.

ಈ ನಿಟ್ಟಿನಲ್ಲಿ ಸಲಹೆಗಳೆಂದರೆ:

  1. ಭಾರತವು ವರ್ಷವೊಂದರಲ್ಲಿ 300 ದಿನಗಳ ಕಾಲ 5 ಕಿ.ವ್ಯಾ.ಘಂ./ಚ.ಮೀ./ದಿನ ಕ್ಕಿಂತಲೂ ಹೆಚ್ಚು ಸೌರ ಶಕ್ತಿ ಲಭ್ಯತೆ ಹೊಂದಿರುವುದರಿಂದ ಎಸ್‍ಪಿವಿ ಮತ್ತು ಸಿಎಸ್‍ಪಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಉತ್ಪಾದಿಸುವ ವಿದ್ಯುಚ್ಛಕ್ತಿಯಿಂದ ಬೇಡಿಕೆ-ಪೂರೈಕೆ ನಡುವಿನ ಕೊರತೆ ನೀಗಿಸಬಹುದು. ಯಾವುದೇ ಪ್ರದೇಶದಲ್ಲಿ ವಿದ್ಯುಚ್ಛಕ್ತಿ ಬೇಡಿಕೆ ಪೂರೈಸಲು ಅವಶ್ಯ ಸಾಮರ್ಥ್ಯದೊಂದಿಗೆ ವಿವೇಕಯುತ ತಂತ್ರಜ್ಞಾನಗಳು ಮತ್ತು ಸೂಕ್ತ ಪ್ರೋತ್ಸಾಹಕರ ನೀತಿಯು ಪರಿಣಾಮಕಾರಿಯಾಗಬಲ್ಲುದು.

  2. ಮೇಲ್ಛಾವಣಿ ಆಧಾರಿತ ಎಸ್‍ಪಿವಿಯು ಗ್ರಾಮೀಣ ಹಾಗೂ ನಗರ ಕುಟುಂಬಗಳ ವಿದ್ಯುತ್ ಬೇಡಿಕೆ ಪೂರೈಸಲು ಸಹಕಾರಿಯಾಗುತ್ತದೆ. ಗ್ರಾಮೀಣ ಕುಟುಂಬವೊಂದಕ್ಕೆ ಮಾಸಿಕ ಸುಮಾರು 70-100 ಕಿ.ವ್ಯಾ.ಘಂ. ಅವಶ್ಯವಿದೆ ಮತ್ತು ಇದನ್ನು ಪೂರೈಸಲು 5-6 ಚ.ಮೀ. ಮೇಲ್ಛಾವಣಿ ವಿಸ್ತೀರ್ಣ ಸಾಕಾಗುತ್ತದೆ (η=10%, ಬಿಸಿಲೂಡಿಕೆಯು 5 ಕಿ.ವ್ಯಾ.ಘಂ./ಚ.ಮೀ./ದಿನ ಇದ್ದಲ್ಲಿ) ಮತ್ತು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸರಾಸರಿ ಮೇಲ್ಛಾವಣಿ ವಿಸ್ತೀರ್ಣವು 110 ಚ.ಮೀ ಇದ್ದು ನಗರ ಪ್ರದೇಶಗಳಲ್ಲಿ 115 ಚ.ಮೀ. ಇದೆ.

  3. ಕರ್ನಾಟಕದ ಒಟ್ಟಾರೆ ಭೌಗೋಳಿಕ ವಿಸ್ತೀರ್ಣದಲ್ಲಿ ಶೇ. 7ರಷ್ಟು ನಿರುಪಯುಕ್ತ ಭೂಮಿ ಲಭ್ಯತೆಯಿದ್ದು, ಇದರ ಶೇ. 1ರಷ್ಟು ವಿಸ್ತಿರ್ಣದಲ್ಲಿ ಎಸ್‍ಪಿವಿ ಅಳವಡಿಕೆ ಮೂಲಕ ನೀರಾವರಿ ಮತ್ತು ಗೃಹಬಳಕೆಗೆ ವಿದ್ಯುತ್ ಉತ್ಪಾದಿಸಬಹುದು.

  4. ಅನುಪಯುಕ್ತ/ ಬರಡು ಭೂಮಿಯಲ್ಲಿ ಎಸ್‍ಪಿವಿ ಅಳವಡಿಕೆಯು ವಿಕೇಂದ್ರೀಕೃತ ವಿದ್ಯುಚ್ಛಕ್ತಿ ಉತ್ಪಾದನೆಗೆ ಸಹಕಾರಿಯಾಗುತ್ತದೆ ಮತ್ತು ಆ ಪ್ರದೇಶಗಳಲ್ಲಿ ಮೇವಿಗಾಗಿ ಹುಲ್ಲುಗಾರಿಕೆ, ಪಶುಸಂಗೋಪನೆಯಂತಹ ಬಹುಪಯೋಗಿ ಚಟುವಟಿಕೆಗಳನ್ನು ಸಾಧ್ಯಗೊಳಿಸುತ್ತದೆ. ಭಾರತದಲ್ಲಿನ್ನೂ ಸುಮಾರು 45 ದಶಲಕ್ಷ ಕುಟುಂಬಗಳಿಗೆ ವಿದ್ಯುಚ್ಛಕ್ತಿ ಪೂರೈಕೆಯಿರುವುದಿಲ್ಲ. ಆದರೆ ಇವುಗಳ ಮೇಲ್ಛಾವಣಿಗಳಲ್ಲಿ ಎಸ್‍ಪಿವಿ ಅಳವಡಿಸಿ ಅವಶ್ಯವಿರುವ ವಿದ್ಯುತ್‍ನ್ನು ಉತ್ಪಾದಿಸಬಹುದು; ಹಾಗೂ ಇದು ಗ್ರಾಮೀಣ ವಿದ್ಯುದ್ದೀಕರಣಕ್ಕೆ ಕ್ರಾಂತಿಕಾರಿ ವಿಧಾನವಾಗಿದೆ.

  5. ಕುಟುಂಬವೊಂದರ ಮಾಸಿಕ ವಿದ್ಯುತ್ ಬಳಕೆಯು 50 ರಿಂದ 100 ಕಿ.ವ್ಯಾ.ಘಂ. ಇರುವ, ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಂತಹ ದೇಶಕ್ಕೆ ಮೇಲ್ಛಾವಣಿ ಎಸ್‍ಪಿವಿ ಅಳವಡಿಕೆಯು ಅತ್ಯಂತ ಸುಲಭವಾಗಿ ಅಳವಡಿಸಬಹುದಾದ ತಂತ್ರಜ್ಞಾನವಾಗಿದೆ. ಕೇಂದ್ರೀಕೃತ ಉತ್ಪಾದನೆಯ ಬದಲು ಮೇಲ್ಛಾವಣಿ ಎಸ್‍ಪಿವಿ ಆಧಾರಿತ ವಿದ್ಯುತ್ ಉತ್ಪಾದನೆಗಾಗಿ ಆರಂಭಿಕ ಅಳವಡಿಕೆಗೆ ಪ್ರೋತ್ಸಾಹಧನ, ಆರ್ಥಿಕ ಸಹಾಯ ಮತ್ತು ತೆರಿಗೆ ವಿನಾಯಿತಿಗಳ ಮೂಲಕ ಬೆಂಬಲ ನೀಡುವುದು.

  6. ವಿದ್ಯುತ್ ಸಂಪರ್ಕ-ರಹಿತ ಹಳ್ಳಿಗಳ ಕುಟುಂಬಗಳಿಗೆ ವಿದ್ಯುತ್ ಪೂರೈಸಲು ವಿದ್ಯುತ್ ಪ್ರಸರಣ ಮತ್ತು ವಿತರಣೆ (ಟಿ & ಡಿ) ನಷ್ಟವಲ್ಲದೆ ಹೆಚ್ಚಿನ ಬಂಡವಾಳ ಬೇಕಾಗುತ್ತದೆ. ಅಧ್ಯಯನ ತಿಳಿಸುವಂತೆ ಕರ್ನಾಟಕದಲ್ಲಿ ಶೇ. 19.5 ರಷ್ಟು ಟಿ & ಡಿ ನಷ್ಟವಿದ್ದು, 7,210 ಗಿ.ವ್ಯಾ.ಘಂ. ವಿದ್ಯುತ್ (2010-11 ರಲ್ಲಿ ವಾರ್ಷಿಕ ಬೇಡಿಕೆ 36,975 ಗಿ.ವ್ಯಾ.ಘಂ.) ಪೋಲಾಗುತ್ತಿದೆ. ಇದರಿಂದ ರೂ. 1,514 (ರೂ. 2.10/ಕಿ.ವ್ಯಾ.ಘಂ. ದರದಲ್ಲಿ) ಕೋಟಿಗಳಿಂದ ರೂ. 5,047 ಕೋಟಿಯಷ್ಟು (ರೂ. 7/ ಕಿ.ವ್ಯಾ.ಘಂ. ದರದಲ್ಲಿ) ವಿದ್ಯುತ್ ವೆಚ್ಚ ನಷ್ಟವಾಗುತ್ತಿದೆ. (ಇದು ಆಯಾಯ ರಾಜ್ಯದ ದರವನ್ನವಲಂಬಿಸಿದೆ).

    ಎಸ್‍ಪಿವಿ ಆಧಾರಿತ ವಿಕೇಂದ್ರೀಕೃತ ವಿದ್ಯುತ್ ಉತ್ಪಾದನೆಯು ಟಿ & ಡಿ ನಷ್ಟ ಇಲ್ಲದಂತೆ ಮಾಡುವುದಲ್ಲದೆ ಆಯಾಯ ಕುಟುಂಬದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಹಕಾರಿಯಾಗುತ್ತದೆ. ಉತ್ಪಾದನೆ ಆಧಾರಿತ ಪ್ರೋತ್ಸಾಹ ನೀತಿಯು (ಜಿಬಿಐ) ವಿಕೇಂದ್ರೀಕೃತ ವಿದ್ಯುತ್ ಉತ್ಪಾದನೆಯನ್ನು ಪ್ರೋತ್ಸಾಹಿಸಿ ಪ್ರಾದೇಶಿಕ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ದಕ್ಷತೆ ಮತ್ತು ವಿಶ್ವಾಸಾರ್ಹತೆಯಿಲ್ಲದ ಕೇಂದ್ರೀಕೃತ ವಿದ್ಯುತ್ ಪೂರೈಕೆಯ ವ್ಯವಸ್ಥೆಯಲ್ಲಿರುವ ಪ್ರಸಕ್ತ ಟಿ & ಡಿ ನಷ್ಟದ ಮಟ್ಟವನ್ನು ಪರಿಗಣಿಸಿದಾಗ ವಿಕೇಂದ್ರೀಕೃತ ವಿದ್ಯುತ್ ಉತ್ಪಾದನೆಯನ್ನು ಪ್ರೋತ್ಸಾಹಿಸುವುದು ಅತ್ಯವಶ್ಯ. ಸಣ್ಣ ಸಾಮಥ್ರ್ಯದ ವ್ಯವಸ್ಥೆಯು ಪರಿಣಾಮಕಾರಿ, ಮಿತವ್ಯಯಿ, ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯ ವಿದ್ಯುತ್ ಬೇಡಿಕೆಯನ್ನು ಪೂರೈಸುತ್ತದೆ.

    ಈ ನಿಟ್ಟಿನಲ್ಲಿ ಪ್ರೋತ್ಸಾಹಕರ ಕ್ರಮಗಳೆಂದರೆ:

    • ಮೊದಲ ಐದು ವರ್ಷಗಳಿಗೆ ಯೂನಿಟ್‍ವೊಂದಕ್ಕೆ ರೂ. 4 (ಮಿನಿ ಜಲ ವಿದ್ಯುತ್ ಯೋಜನೆಗಳಿಗೆ ನೀಡುವ ಸಹಾಯಧನ ರೂ. 3.50 ರಂತೆ ವಿದ್ಯುತ್ ಖರೀದಿಗೆ ಹೋಲಿಸಿದರೆ) ಮತ್ತು ಮೇಲ್ಛಾವಣಿ ಎಸ್‍ಪಿವಿ ಯಿಂದ ಉತ್ಪಾದಿಸುವ ವಿದ್ಯುತ್‍ಗೆ ಮುಂದಿನ ಎರಡು ವರ್ಷಗಳಿಗೆ ರೂ. 3.50 ಸಹಾಯಧನ ನೀಡುವುದು.

    • ಗೃಹೋಪಯೋಗಿ ಮಟ್ಟದಲ್ಲಿ ಸಣ್ಣ ಗ್ರಿಡ್‍ಗಳಿಂದ ಉತ್ಪಾದಿಸುವ ವಿದ್ಯುತ್ ವಾಪಸ್ ಖರೀದಿಸುವ ಕಾರ್ಯಕ್ರಮಗಳಿಗೆ ಮತ್ತು ಎಸ್‍ಪಿವಿಯಿಂದ ಗ್ರಿಡ್‍ಗೆ ಪೂರೈಕೆಯಾಗುವ ವಿದ್ಯುತ್ ಉತ್ಪಾದನೆಗೆ (5 ಕಿ.ವ್ಯಾ. ಗಿಂತ ಕಡಿಮೆಯಿರುವ) ಪ್ರತಿ-ಪೂರೈಕೆ ದರ ರೂ. 5/ ಯೂನಿಟ್ ನೀಡುವುದು.

    • ಕರ್ನಾಟಕ ಸರ್ಕಾರ ಅಥವಾ ಜೆಎನ್‍ಎನ್‍ಎಸ್‍ಎಮ್ (ಜವಹರ್ ಲಾಲ್ ನೆಹರೂ ರಾಷ್ಟ್ರೀಯ ಸೌರ ಮಿಷನ್, ಭಾರತ ಸರ್ಕಾರ,JNNSM), ಮುಖ್ಯಮಂತ್ರಿಗಳ ಸೌರ ಆಧಾರಿತ ಹಸಿರು ಮನೆ ಯೋಜನೆ (ಸಿಎಂಎಸ್‍ಪಿಜಿಹೆಚ್‍ಎಸ್, CMSPGHS) ಅಡಿಯಲ್ಲಿ ಉಚಿತ ಸೌರ ದೀಪ (ಎಲ್‍ಇಡಿ ದೀಪಗಳೊಂದಿಗೆ) ನೀಡುವುದು.

    • ಸ್ಥಳೀಯ ಸಂಸ್ಥೆಗಳಲ್ಲಿ, ಎಲ್ಲ ಬೀದಿ ದೀಪಗಳು ಮತ್ತು ನೀರು ಪೂರೈಕೆ ಅಳವಡಿಕೆಗಳನ್ನು ಹಂತ ಹಂತವಾಗಿ ಸೌರ ವಿದ್ಯುತ್ (ಅಥವಾ ಹೈಬ್ರಿಡ್ ವಿಧಾನ) ನಿಂದ ವಿದ್ಯುದ್ದೀಕರಣಗೊಳಿಸಬಹುದು.

    • ಎಲ್ಲ ಹೊಸ ಸರ್ಕಾರಿ/ಸ್ಥಳೀಯ ಸಂಸ್ಥೆಗಳ ಕಟ್ಟಡಗಳಲ್ಲಿ ಸೌರ ವಿದ್ಯುತ್‍ನ್ನು ಮೇಲ್ಛಾವಣಿಯಲ್ಲಿ ಅಳವಡಿಸುವುದು - ಪ್ರಸ್ತುತವಿರುವ ಸರ್ಕಾರಿ/ಸ್ಥಳೀಯ ಸಂಸ್ಥೆಗಳ ಕಟ್ಟಡ, ಇತ್ಯಾದಿಗಳಲ್ಲಿ ಸೌರ ವಿದ್ಯುತ್‍ನ್ನು ಮೇಲ್ಛಾವಣಿಯಲ್ಲಿ ಹಂತ ಹಂತವಾಗಿ ಅಳವಡಿಸುವುದು

    • ಸ್ವಂತ-ಬಳಕೆಗಾಗಿ/ಸಾರ್ವಜನಿಕ ಬಳಕೆಗಾಗಿ ಮಾರಾಟ ಮಾಡುವಂಥಹ ಸೌರ ವಿದ್ಯುತ್ ಯೋಜನೆಗಳಿಂದ ಉತ್ಪಾದನೆಯಾಗುವ ವಿದ್ಯುತ್ ಮೇಲೆ ಶೇ. 100 ರಷ್ಟು ವಿದ್ಯುತ್ ತೆರಿಗೆ ವಿನಾಯಿತಿಯನ್ನು ಕನಿಷ್ಟ 10 ವರ್ಷಗಳ ಕಾಲ ನೀಡುವುದು.

    • ಗುಣಮಟ್ಟದ ಅಳವಡಿಕೆಗಾಗಿ ಮಾನವನ್ನು ನಿಗದಿಪಡಿಸುವುದು.

  7. ಜಾಹೀರಾತು ಫಲಕಗಳಲ್ಲಿ, ವಾಣಿಜ್ಯ ಬಳಕೆಗೆ ಬಳಸುವ ದೀಪವನ್ನು ಎಸ್‍ಪಿವಿ ಪ್ಯಾನೆಲ್‍ಗಳಿಂದ ಮಾತ್ರವೇ ಉಪಯೋಗಿಸುವುದು. ಇಂತಹ ಬಳಕೆಗೆ ಗ್ರಿಡ್ ವಿದ್ಯುತ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸುವುದು.

  8. ಗ್ರಿಡ್ ತಂತ್ರಜ್ಞಾನಗಳು, ಎರಡು ಪಥ ಸಂವಹನ ವಿದ್ಯುತ್ ಮೀಟರ್‍ಗಳು (Two-way communication meters, ಪ್ರಸ್ತುತವಿರುವ ಗ್ರಿಡ್‍ಗೆ ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆಯನ್ನು ಸಂಪರ್ಕಿಸಲು), ಪರಿಣಾಮಕಾರಿ ಪ್ರಕಾಶದೀಪಗಳ ಉತ್ಪಾದನೆ, ಕಡಿಮೆ ವೆಚ್ಚದ ತಂತಿ ಅಳವಡಿಕೆ (ವೈರಿಂಗ್), ರಕ್ಷಕ ಸಾಮಗ್ರಿಗಳು (ಸ್ವಿಚ್‍ಗೇರ್‍ಗಳು), ಇತರೆ ವಿದ್ಯುತ್ ಉಪಕರಣಗಳಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ನಿರಂತರ ಅವಶ್ಯ ಅನುದಾನ ಒದಗಿಸುವ ಮೂಲಕ ಪರ್ಯಾಯ ಶಕ್ತಿ ಮೂಲ ಮತ್ತು ವಿದ್ಯುತ್ ಸಂಶೋಧನೆಗೆ ಒತ್ತು ನೀಡುವುದು.

  9. ಎಲ್ಲ ಹಂತಗಳಲ್ಲಿ ನವೀಕರಿಸಬಹುದಾದ ತಂತ್ರಜ್ಞಾನಗಳನ್ನು ಮುಖ್ಯವಾಗಿ ಆಧರಿಸಿದ, ಬಳಕೆ ಮಟ್ಟದಲ್ಲಿ ವಿದ್ಯುತ್ ದಕ್ಷತೆ ಅಭಿವೃದ್ಧಿ ಮತ್ತು ವಿದ್ಯುತ್ ಸಂರಕ್ಷಣೆ ಕುರಿತು ಶಿಕ್ಷಣ. ಶಾಲಾ ಪಠ್ಯಕ್ರಮದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಪರಿಕಲ್ಪನೆಗಳನ್ನು ಅಳವಡಿಸುವುದು.

  10. ಇಂಧನ ಸ್ವತಂತ್ರತೆ ಮತ್ತು ಪ್ರಸಕ್ತ ಬಿಕ್ಕಟ್ಟುಗೊಂಡಿರುವ ವಿದ್ಯುತ್ ಚಿತ್ರಣದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಅವಶ್ಯಕತೆಗಳ ಕುರಿತು ಬಳಕೆದಾರರಲ್ಲಿ ಜಾಗೃತಿ ಮೂಡಿಸುವುದು.

  11. ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗಳು ಮತ್ತು ಪ್ರಾಮುಖ್ಯತೆ ಕುರಿತು ಬಳಕೆದಾರರಲ್ಲಿ ಜಾಗೃತಿ ಹಾಗೂ ಶಿಕ್ಷಣ ನೀಡುವುದು.

  12. ಎಸ್‍ಪಿವಿ ಪ್ಯಾನೆಲ್‍ಗಳ ಅಳವಡಿಕೆ ಮತ್ತು ರಿಪೇರಿ ಸೇವೆಗಳನ್ನು ತಾಂತ್ರಿಕ ಶಿಕ್ಷಣದ ಮೂಲಕ ನೀಡಲು ಯುವಜನತೆಗೆ ತರಬೇತಿ ನೀಡುವುದು.

  13. ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳ ಮೇಲೆ ಪ್ರಾಯೋಗಿಕ ತರಬೇತಿ ಒಳಗೊಂಡ ಪಾಲಿ ಟೆಕ್ನಿಕ್/ ಡಿಪ್ಲೋಮಾ/ಐಟಿಐ (Technical Education) ಕೋರ್ಸುಗಳನ್ನು ಪ್ರತಿ ತಾಲ್ಲೂಕಿನಲ್ಲಿ ಆರಂಭಿಸುವುದು.

  14. ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳಿಗೆ (ಸೌರ, ಜೈವಿಕ, ಇಂಧನ ದಕ್ಷತೆಯುಳ್ಳ ಒಲೆಗಳು, ಇತ್ಯಾದಿ) ಸೇವಾ ಸೌಲಭ್ಯ ನೀಡುವ ಅವಶ್ಯಕತೆಗಳನ್ನು ಪೂರೈಸಲು ಬ್ಲಾಕ್ ಅಭಿವೃದ್ಧಿ ಕಛೇರಿಗಳಲ್ಲಿ ಗ್ರಾಹಕ ಸೇವಾ ಕೇಂದ್ರಗಳನ್ನು ಸ್ಥಾಪಿಸುವುದು.

  15. ಬಳಕೆದಾರರನ್ನು ಪ್ರೋತ್ಸಾಹಿಸಲು ಎಫ್‍ಐಟಿ (ಪ್ರತಿ-ಪೂರೈಕೆ ದರ) ರಚನೆ ಮತ್ತು ಪ್ರೋತ್ಸಾಹಧನಗಳನ್ನು ಕಾಲಕಾಲಕ್ಕೆ ಪರಿಷ್ಕರಿಸುವುದು.

  16. ಎಲ್ಲ ವೃತ್ತಿಯ ಆರಂಭಿಕ ಹಂತಗಳಲ್ಲಿ ಅಧಿಕಾರಿಗಳು ಮತ್ತು ವಿದ್ಯುತ್ ವೃತ್ತಿಪರರಿಗೆ ಕಡ್ಡಾಯವಾಗಿ ಒಂದು ವಾರದ ಸಾಮರ್ಥ್ಯ ತುಂಬುವ/ ತರಬೇತಿ ಕಾರ್ಯಕ್ರಮಗಳ ಅವಶ್ಯಕತೆಯಿದೆ. ಏಕೆಂದರೆ ಭಾರತದಲ್ಲಿ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಪಸರಿಸಲು ಅಧಿಕಾರಿಗಳಲ್ಲಿ ಜಾಗೃತಿ/ಜ್ಞಾನದ ಕೊರತೆಯೇ ಪ್ರಧಾನ ತೊಡಕಾಗಿದೆ.

BACK  «  TOP  »  NEXT
ಉಲ್ಲೇಖ : ರಾಮಚಂದ್ರ ಟಿ.ವಿ. ಮತ್ತು ಗಣೇಶ ಹೆಗಡ, ೨೦೧೪. ಸೌರ ಶಕ್ತಿ – ಕರ್ನಾಟಕ ರಾಜ್ಯಕ್ಕೆ ಸುಸ್ಥಿರ ಇಂಧನ., ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ "ವಿಜ್ಞಾನ ಲೋಕ", ಸಂಪುಟ : ೭, ಸಂಚಿಕೆ : ೬, ಮಾರ್ಚ್ ೨೦೧೪.
* Corresponding Author :
Dr. T.V. Ramachandra
Energy & Wetlands Research Group, Centre for Ecological Sciences, Indian Institute of Science, Bangalore – 560 012, India.
Tel : +91-80-2293 3099/2293 3503 [extn - 107],      Fax : 91-80-23601428 / 23600085 / 23600683 [CES-TVR]
E-mail : cestvr@ces.iisc.ernet.in, energy@ces.iisc.ernet.in,     Web : http://wgbis.ces.iisc.ernet.in/energy, http://ces.iisc.ernet.in/grass
ಮಿಂಚಂಚೆ    |    ಸಹ್ಯಾದ್ರಿ    |    ಎನ್ವಿಸ್    |    ಗ್ರಾಸ್    |    ಎನರ್ಜಿ    |      ಸಿ ಇ ಎಸ್      |      ಸಿ ಎಸ್ ಟಿ      |    ಸಿಸ್ಟುಪ್    |      ಐ ಐ ಎಸ್ ಸಿ      |    ಮಿಂಚಂಚೆ
Dr. T.V. Ramachandra
Energy & Wetlands Research Group, Centre for Ecological Sciences.,
Centre for Sustainable Technologies,
Centre for infrastructure, Sustainable Transportation and Urban Planning (CiSTUP),
Indian Institute of Science, Bangalore – 560 012, INDIA.
E-mail : cestvr@ces.iisc.ernet.in
Tel: 91-080-22933099/22933503 (extn 107)
Fax: 91-080-23601428/23600085
Web: http://ces.iisc.ernet.in/energy
Ganesh Hegde
Energy and Wetlands Research Group, Centre for Ecological Sciences, Indian Institute of Science, Bangalore – 560012, India
E-mail: ganesh@ces.iisc.ernet.in
Citation: Ramachandra T.V. and Ganesh Hegde, 2014. Solar Energy – the sustainable energy option in Karnataka., Karnataka Science and Technology Academy "Vijnana Loka" Volume 7, Issue 6, March 2014.
Contact Address :
  Dr. T.V. Ramachandra
Energy & Wetlands Research Group,
Centre for Ecological Sciences, Indian Institute of Science, Bangalore – 560 012, INDIA.
Tel : +91-80-2293 3099/2293 3503 - extn 107
Fax : 91-80-23601428 / 23600085 / 23600683 [CES-TVR]
E-mail : cestvr@ces.iisc.ernet.in, energy@ces.iisc.ernet.in,    Web : http://wgbis.ces.iisc.ernet.in/energy