ಸಾರಾಂಶ
ಭೂಮಿಯ ಮೇಲ್ಮೈ ಮೇಲೆ ಬೀಳುವ ಸೌರಶಕ್ತಿಯು ಪ್ರಾಥಮಿಕವಾಗಿ ಭೌಗೋಳಿಕ ನೆಲೆ, ಭೂಮಿ-ಸೂರ್ಯನ ಚಲನೆ, ಭೂಮಿಯ ಪರಿಭ್ರಮಣ ರೇಖೆಯ ಓರೆ ಮತ್ತು ತೇಲುವ ಕಣಗಳಿಂದಾಗಿ ವಾತಾವರಣವು ಸೌರಶಕ್ತಿಯನ್ನು ಕುಂದಿಸುವ ಕ್ರಿಯೆ (Attenuation) ಮುಂತಾದ ಅಂಶಗಳನ್ನು ಅವಲಂಬಿಸಿರುತ್ತದೆ ಒಂದು ಪ್ರದೇಶದ ಸೌರ ಸಂಪನ್ಮೂಲ ಸಾಮರ್ಥ್ಯ ಅಥವಾ ಲಭ್ಯತೆಯನ್ನು ಸೌರಶಕ್ತಿಯ ಬಿಸಿಲು ಕಾಯಿಸುವ (ಬಿಸಿಲೂಡಿಕೆ, Solar Insolation) ಪ್ರಮಾಣವು ನಿರ್ಧರಿಸುತ್ತದೆ. ಸೌರಶಕ್ತಿ ತಂತ್ರಜ್ಞಾನಗಳ ತಾಂತ್ರಿಕ-ಆರ್ಥಿಕ ವಿಶ್ಲೇಷಣೆ ಮತ್ತು ಪ್ರತಿ ತಾಲ್ಲೂಕು ಹಾಗೂ ಹಳ್ಳಿಯಲ್ಲಿ ನಿರುಪಯುಕ್ತ ಭೂಮಿಯ ಸಮರ್ಥ ಬಳಕೆಯು, ಹಸಿರು ಮನೆ ಅನಿಲಗಳ ವಿಸರ್ಜನೆಯನ್ನು ತಗ್ಗಿಸುವುದಲ್ಲದೆ, ಅಗಾಧ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಸಾಧ್ಯತೆಯನ್ನು ತೋರಿಸುತ್ತದೆ. ಕರ್ನಾಟಕವು ಅಧಿಕ ಪ್ರಮಾಣದ ಸೌರ ಸಾಮಥ್ರ್ಯವನ್ನು ಹೊಂದಿದ್ದು 5 ಕಿ.ವ್ಯಾ.ಘ./ಚ.ಮೀ./ದಿನ (kWh/m2/day) ಸರಾಸರಿ ಬಿಸಿಲು ಕಾಯಿಸುವ ಪ್ರಮಾಣದೊಂದಿಗೆ, 300-330 ಸ್ಪಷ್ಟ ಬಿಸಿಲಿನ ದಿನಗಳನ್ನು ಹೊಂದಿದೆ. ಎಲ್ಲ ಪ್ರದೇಶಗಳು ಮತ್ತು ಮಾನವ ಚಟುವಟಿಕೆಗಳು ಬಯಸುವ ಶಕ್ತಿಯನ್ನು ಪಡೆಯಲು ನಿಸರ್ಗದ ಅಗಾಧ ಸೌರ ಸಾಮಥ್ರ್ಯವನ್ನು ವಿಕೇಂದ್ರೀಕೃತವಾಗಿ ಬಳಸಿಕೊಳ್ಳುವ ಅವಶ್ಯಕತೆ ಮತ್ತು ಅವಕಾಶಗಳನ್ನು ಪ್ರಸ್ತುತ ಅಧ್ಯಯನವು ಅಭ್ಯಸಿಸುತ್ತದೆ.
ಅರಣ್ಯನಾಶ, ಜನತೆಯ ಸ್ಥಳಾಂತರ, ವಾಯು, ಜಲ ಭೂಮಿ ಮತ್ತು ಪರಿಸರ ಮಾಲಿನ್ಯಗಳಂಥಹ ಸಮಸ್ಯೆಗಳಿಂದಾಗಿ ವಿದ್ಯುತ್ ಉತ್ಪಾದನೆಗಾಗಿ ಅವಶ್ಯವಿರುವ ಭೂಮಿ (ನೇರ ಅಥವಾ ಪರೋಕ್ಷ ಬಳಕೆಗೆ) ಸಿಗುವುದು ಕಷ್ಟಸಾಧ್ಯವಾಗಿದೆ.. ಪ್ರತಿಯೊಂದು ಮನೆಯ ಮೇಲ್ಛಾವಣಿಯ ಮೇಲೆ ಸೌರಶಕಿ ಉತ್ಪಾದನೆಯಿಂದ ಭೂಮಿಯ ಬೇಡಿಕೆ ಕಡಿಮೆಯಾಗುತ್ತದೆ. 1 ಕಿ.ವ್ಯಾ ಸೌರ ದ್ಯುತಿಕೋಶವನ್ನು (ಸೋಲಾರ್ ಪೋಟೋ ವೋಲ್ಟಾಯಿಕ್ ಪ್ಯಾನೆಲ್, ಎಸ್‍ಪಿವಿ, Solar Photovoltaic Panel, SPV) ಅಳವಡಿಸಲು ಸುಮಾರು 100 ಚ.ಮೀ. ಅವಶ್ಯವಿದೆ. ಮನೆಗಳಿಗೆ ಮಾಸಿಕ ಅವಶ್ಯವಿರುವ 50-100 ಯೂನಿಟ್‍ಗಳಷ್ಟು (kWh, ಕಿ.ವ್ಯಾ.ಘಂ.) ಬೇಡಿಕೆಯನ್ನು ಸೌರ ದ್ಯುತಿಕೋಶದ ಮೂಲಕ ಅವಶ್ಯವಿರುವ ಮೇಲ್ಛಾವಣಿ ವಿಸ್ತೀರ್ಣವು ಒದಗಿಸಲು 100 ಚ.ಮೀ ವಿಸ್ತೀರ್ಣದ ಸ್ವಲ್ಪಭಾಗ ಮಾತ್ರವೇ ಸಾಕಾಗುತ್ತದೆ, ಏಕೆಂದರೆ ಅವಶ್ಯವಿರುವ ವಿಸ್ತೀರ್ಣವು ಅಳವಡಿಸುವ ಸಾಮಥ್ರ್ಯ ಅಥವಾ ಬೇಡಿಕೆಗೆ ನೇರ ಅನುಪಾತದಲ್ಲಿರುತ್ತದೆ. ಹಾಗೆಯೇ, ಗ್ರಾಮೀಣ ಪ್ರದೇಶದಲ್ಲಿ ನೀರಾವರಿಗಾಗಿ ವಿದ್ಯುತ್ ಬೇಡಿಕೆ ನೀಗಿಸಲು, ಶೇ. 1 ರಿಂದ 3 ರಷ್ಟು ನಿರುಪಯುಕ್ತ ಭೂಮಿಯು ಸಾಕೆಂದು ಲೆಕ್ಕಾಚಾರವು ತೋರಿಸುತ್ತದೆ.
ಪ್ರಸಕ್ತ ಸನ್ನಿವೇಶದಲ್ಲಿ ವಿವಿಧ ಸೌರ ತಂತ್ರಜ್ಞಾನಗಳ (ಉಷ್ಣ ಮತ್ತು ಪೋಟೋವೋಲ್ಟಾಯಿಕ್) ತಾಂತ್ರಿಕ-ಆರ್ಥಿಕ ವಿಶ್ಲೇಷಣೆ ಮತ್ತು ಭವಿಷ್ಯತ್ತಿನ ಸವಾಲುಗಳು ಸಮಾನ ಪ್ರಾಮುಖ್ಯತೆ ಹೊಂದಿವೆ. ಸೌರ ಉಷ್ಣ ವಿಧಾನ ಮತ್ತು ಪೋಟೋ ವೋಲ್ಟಾಯಿಕ್ ವಿಧಾನ ಇವೆರಡೂ ಮೂಲಭೂತವಾಗಿ ಸೌರ ಇಂಧನ ಪರಿವರ್ತನೆಯ ಬೇರೆ ಬೇರೆ ಪರಿಕಲ್ಪನೆಗಳು. ಸೌರ ಉಷ್ಣಾಂಶ ವಿಧಾನವು ಸೌರ ವಿಕಿರಣದಲ್ಲಿರುವ ಉಷ್ಣ ಶಕ್ತಿಯನ್ನು ಕೇಂದ್ರೀಕರಿಸಿ ಆ ಶಕ್ತಿಯನ್ನು ಜಲ ಅಥವಾ ಅನಿಲ ಮಾಧ್ಯಮಕ್ಕೆ ವರ್ಗಾಯಿಸುತ್ತದೆ. ಸೌರ ಪೋಟೋ ವೋಲ್ಟಾಯಿಕ್ ನೇರವಾಗಿ ಸೌರ ವಿಕಿರಣವನ್ನು ದ್ಯುತಿ ವಿದ್ಯುತ್ ಪರಿಣಾಮದ ಮೂಲಕ ನೇರ ವಿದ್ಯುತ್ (ಡಿಸಿ) ಆಗಿ ಪರಿವರ್ತಿಸುತ್ತದೆ. ಇದು ದ್ಯುತಿಕೋಶ (ಎಸ್‍ಪಿವಿ) ಎಂದು ಕರೆಯಲಾಗುವ ಅರೆವಾಹಕ ಸಿಲಿಕಾನ್‍ನ್ನು ಉಪಯೋಗಿಸುತ್ತದೆ. ತಾಂತ್ರಿಕ-ಆರ್ಥಿಕ ವಿಶ್ಲೇಷಣೆ ತೋರಿಸುವುದೇನೆಂದರೆ ಬೃಹತ್ ಮಟ್ಟದಲ್ಲಿ ಸೌರ ವಿದ್ಯುತ್ ಉತ್ಪಾದನೆ ಇತರೆ ವಿದ್ಯುತ್ ತಂತ್ರಜ್ಞಾನಗಳಿಗಿಂತ ಪ್ರಾಯೋಗಿಕ.
ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ನವೀಕರಿಸಬಹುದಾದ ಇಂಧನ ಮೂಲಗಳಿಂದ ಶೇ. 25ರಷ್ಟು ಇಂಧನ ಲಭ್ಯವಾದರೂ, ಮೇಲ್ಛಾವಣಿ ಎಸ್‍ಪಿವಿ ತಂತ್ರಜ್ಞಾನ ಮತ್ತು ಅನುಪಯುಕ್ತ ಬರಡು ಭೂಮಿಯಲ್ಲಿ ಎಸ್‍ಪಿವಿ ಅಳವಡಿಕೆಗಳನ್ನು ಒಳಗೊಂಡಂತೆ ನವೀಕರಿಸಬಹುದಾದ ಇಂಧನದ ವಿಪುಲ ಸಾಮರ್ಥ್ಯವನ್ನು ಇನ್ನೂ ಬಳಕೆಗೆ ತರಲಾಗಿಲ್ಲ. ಪೂರೈಕೆ-ಬೇಡಿಕೆ ನಡುವಿನ ಅಂತರ ಹೆಚ್ಚುತ್ತಿದ್ದು ಪ್ರಸಕ್ತದಲ್ಲಿ ರಾಜ್ಯವು ಗಣನೀಯ ವಿದ್ಯುತ್ ಕೊರತೆ ಎದುರಿಸುತ್ತಿದೆ. ಆದ್ದರಿಂದ ಮಲಿನಕಾರಿ ಪಳಿಯುಳಿಕೆ-ಇಂಧನ ಆಧಾರಿತ ಘಟಕಗಳನ್ನು ಶಿಫಾರಸು ಮಾಡುವ ಬದಲಿಗೆ ನವೀಕರಿಸಬಹುದಾದ ಇಂಧನ ಆಧಾರಿತ ವಿಕೇಂದ್ರೀಕೃತ ವಿದ್ಯುತ್ ಶಕ್ತಿ ಉತ್ಪಾದನೆಯು ಪರಿಣಾಮಕಾರಿ ಮತ್ತು ವಿಶ್ವಾಸಾರ್ಹನೀಯ.
ಕರ್ನಾಟಕವು ಸರಾಸರಿ ವಾರ್ಷಿಕ ಬಿಸಿಲೂಡಿಕೆ ಪ್ರಮಾಣ 5.55 ಕಿ.ವ್ಯಾ.ಘ/ಚ.ಮೀ/ದಿನ ಹೊಂದಿದೆ. ಬಿಸಿಲೂಡಿಕೆಯು ವರ್ಷಪೂರ 4.5 ರಿಂದ 7 ಕಿ.ವ್ಯಾ.ಘ/ಚ.ಮೀ/ದಿನ ವರೆಗೆ ವ್ಯಾಪಿಸಿದೆ. ಕೊಡಗನ್ನು (5 ದಿಂದ 5.5 ಕಿ.ವ್ಯಾ.ಘ/ಚ.ಮೀ/ದಿನ) ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳು ವಾರ್ಷಿಕ 5.5 ರಿಂದ 6.5 ಕಿ.ವ್ಯಾ.ಘ/ಚ.ಮೀ/ದಿನ ಬಿಸಿಲೂಡಿಕೆ ಹೊಂದಿವೆ. ಸೌರ ಶಕ್ತಿ ಆಧಾರಿತ ವಿದ್ಯುತ್ ಉತ್ಪಾದನೆಯು ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಬಲ್ಲುದೆಂದು ನಮಗೆ ತೋರಿಸಿಕೊಡುತ್ತದೆ. ರಾಜ್ಯದ ಇಂದಿನ ಮತ್ತು ಭವಿಷ್ಯತ್ತಿನ ವಿದ್ಯುತ್ ಬೇಡಿಕೆಯನ್ನು ಪೂರೈಸಲು ವಿಕೇಂದ್ರೀಕೃತ, ಮೇಲ್ಛಾವಣಿ ಉತ್ಪಾದನೆಗಾಗಿ ಸರ್ಕಾರದ ನೆರವು ಮತ್ತು ಪ್ರೋತ್ಸಾಹವು ಗಣನೀಯವಾಗಿ ಕೊಡುಗೆ ನೀಡಬಲ್ಲುದು. ಉತ್ಪಾದನಾ ಆಧಾರಿತ ಪ್ರೋತ್ಸಾಹವು (Generation Based Incentive, GBI) ಪ್ರತಿ ಮನೆಯ ಮೇಲ್ಛಾವಣಿಗಳಲ್ಲಿ ವಿಕೇಂದ್ರೀಕೃತ ವಿದ್ಯುತ್ ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತದೆ. ಇತರೆ ಕೆಲವು ಕೈಗೊಳ್ಳಬಹುದಾದ ಕ್ರಮಗಳೆಂದರೆ: 1) ಸಾರ್ವಜನಿಕ ಮತ್ತು ರಸ್ತೆ ಸೌರ ದೀಪ 2) ಸರ್ಕಾರಿ ಸಂಸ್ಥೆಗಳು ಮತ್ತು ಇತರೆ ಕಟ್ಟಡಗಳಲ್ಲಿ ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್ ಉತ್ಪಾದನೆ 3) ಈಗಿರುವ ಸರ್ಕಾರಿ ಕಟ್ಟಡಗಳಲ್ಲಿ ಮೇಲ್ಛಾವಣಿಗಳಲ್ಲಿ ಸೌರ ವಿದ್ಯುತ್ ಉತ್ಪಾದನೆ ಅನುಷ್ಟಾನಗೊಳಿಸುವುದು ಮತ್ತು ಅದಕ್ಕೆ ಆರ್ಥಿಕ ಪ್ರೋತ್ಸಾಹ ನೀಡುವುದು. ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳಿಗೆ ಪರಿವರ್ತಿಸಿಕೊಳ್ಳುವುದರಿಂದ ಮಲಿನಕಾರಿ ಹಸಿರು ಮನೆ ಅನಿಲ ವಿಸರ್ಜನೆಯನ್ನು ಹಾಗೂ ಖಾಲಿಯಾಗುತ್ತಿರುವ ಸಾಂಪ್ರದಾಯಿಕ ಇಂಧನಗಳ ಮೇಲಿನ ಒತ್ತಡವನ್ನು ತಗ್ಗಿಸುತ್ತದೆ.