ಸಾಮಗ್ರಿ ಮತ್ತು ವಿಧಾನ
4.1 ಅಧ್ಯಯನ ಪ್ರದೇಶ: ಕರ್ನಾಟಕ
ಕರ್ನಾಟಕ ರಾಜ್ಯವು 74.20 ಯಿಂದ 78.50 ಅಕ್ಷಾಂಶ ಮತ್ತು 11.30 ರಿಂದ 18.80 ರೇಖಾಂಶಗಳ ನಡುವೆ ಇದ್ದು 1,91,791 ಚ. ಕಿ.ಮೀ (ಚಿತ್ರ 1) ವಿಸ್ತೀರ್ಣವನ್ನು ಹೊಂದಿದೆ. ಇದು ದೇಶದಲ್ಲಿ 8ನೇ ಅತಿ ದೊಡ್ಡ ರಾಜ್ಯವಾಗಿದ್ದು ಚ.ಕಿ.ಮೀಗೆ 320 ಜನಸಾಂದ್ರತೆ ಹೊಂದಿದೆ. ಕರ್ನಾಟಕವು ಭಾರತದ ದಕ್ಷಿಣ ಭಾಗದಲ್ಲಿದ್ದು , 30 ಜಿಲ್ಲೆಗಳು, 179 ತಾಲ್ಲೂಕುಗಳು ಮತ್ತು 29,000 ಕ್ಕೂ ಹೆಚ್ಚು ಗ್ರಾಮಗಳನ್ನು ಹೊಂದಿದೆ. ರಾಜ್ಯವು ವಾರ್ಷಿಕ ಸರಾಸರಿ 3,638 ಮಿ.ಮೀ ಮಳೆ ಮತ್ತು ವಾರ್ಷಿಕ ಸರಾಸರಿ ಬಿಸಿಲೂಡಿಕೆ 5.55 ಕಿ.ವ್ಯಾ.ಘಂ/ಚ.ಮೀ/ದಿನ ಹೊಂದಿದೆ. ಚಿತ್ರ 1 ರಾಜ್ಯದ ಪಕ್ಷಿನೋಟವನ್ನು ನೀಡುತ್ತದೆ.
ಚಿತ್ರ 1: ಅಧ್ಯಯನ ಪ್ರದೇಶ – ಕರ್ನಾಟಕ ರಾಜ್ಯ
4.2 ಸೌರ ಸಾಮರ್ಥ್ಯದ ಅಧ್ಯಯನ
ನಾಸಾ ಎಸ್‍ಎಸ್‍ಇ (NASA SSE) ಜಾಗತಿಕ ಬಿಸಿಲೂಡಿಕೆ ದತ್ತಾಂಶಗಳನ್ನು ವಾತಾವರಣದಲ್ಲಿರುವ ವಿಕಿರಣ ವರ್ಗಾವಣೆ ಆಧಾರದ ಭೌತಿಕ ಮಾದರಿಯಿಂದ ಮತ್ತು ಅದರ ಹೀರುವಿಕೆ ಮತ್ತು ಚದುರುವಿಕೆ ಗುಣಗಳ ಪರಿಮಾಣಗಳಿಂದ ರೂಪಿಸಲಾಗಿದೆ. ಈ ಮಾದರಿಗೆ ಪ್ರಾಥಮಿಕ ದತ್ತಾಂಶಗಳೆಂದರೆ ಕಣ್ಣಿಗೆ ಕಾಣುವ ಮತ್ತು ಅವಗೆಂಪು (ಇನ್‍ಫ್ರಾರೆಡ್) ವಿಕಿರಣ, ಮೋಡ ಮತ್ತು ಮೇಲ್ಮೈ ಗುಣಗಳು, ಉಷ್ಣಾಂಶ, ನೀರಿನಂಶ, ಲಂಬ ಓಜೋನ್ ಮೊತ್ತ ಮತ್ತು ವಿವಿಧ ಉಪಗ್ರಹ ಸಾಧನಗಳನ್ನು ಬಳಸಿಕೊಂಡು ವಾತಾವರಣದ ಪರಿಮಾಣಗಳಾದ ಉಷ್ಣಾಂಶ ಮತ್ತು ಒತ್ತಡಗಳನ್ನು ಅಳೆಯಲಾಗುತ್ತದೆ. ವಿವಿಧ ನೆಲೆಗಳು ಮತ್ತು ಅವಧಿಗಳಿಗಾಗಿ ಜಾಗತಿಕ ಬಿಸಿಲೂಡಿಕೆಯನ್ನು ಪಡೆಯಲು ಸಂಗ್ರಹಿಸಿದ ಸಂಜ್ಞೆಗಳ ಜೊತೆ ಉಪಗ್ರಹ ಸಂವೇದಕಗಳಿಗೆ ಪ್ರತಿಫಲನಗೊಳ್ಳುವ ದೀರ್ಘ ತರಂಗಾಂತರ ಮತ್ತು ಕಿರು ತರಂಗಾಂತರ ಸೌರ ವಿಕಿರಣಗಳನ್ನು ಅಭ್ಯಸಿಸಲಾಗುತ್ತದೆ. 22 ವರ್ಷಗಳ ಅವಧಿಗೆ (ಜುಲೈ 1, 1983 ರಿಂದ ಜೂನ್ 30, 2005) ನಾಸಾ ಎಸ್‍ಎಸ್‍ಇ ಜಾಲತಾಣದಿಂದ (http://eosweb.larc.nasa.gov/sse/) ಪಡೆದ 1oX1o ಪ್ರದೇಶದ ಸ್ಥಳವಿಸ್ತಾರ (ಗ್ರಿಡ್) ಮತ್ತು ಸ್ಪಷ್ಟಚಿತ್ರಣ ಎಸ್‍ಎಸ್‍ಇ ಜಾಗತಿಕ ಬಿಸಿಲೂಡಿಕೆ ದತ್ತಾಂಶಗಳನ್ನು, ಪ್ರತಿ 3 ಘಂಟೆಗಳಿಗೆ ಅಳತೆ ಮಾಡಿ ಪಡೆದ ದೈನಿಕ, ಮಾಸಿಕ ಮತ್ತು ವಾರ್ಷಿಕ ಸರಾಸರಿಯಂತೆ ಲಭ್ಯವಿರುವ ಭೂ ಮೇಲ್ಮೈ ವಿಕಿರಣ ಜಾಲಬಂಧ (Baseline Surface Radiation Network, ಬಿಎಸ್‍ಆರ್‍ಎನ್) ದತ್ತಾಂಶಗಳೊಂದಿಗೆ ಖಚಿತಪಡಿಸಿಕೊಳ್ಳಲಾಯಿತು.
ಈ ಅಧ್ಯಯನದಲ್ಲಿ, ರಾಜ್ಯವಾರು ನಾಸಾ ಎಸ್‍ಎಸ್‍ಇ ಮಾಸಿಕ ಸರಾಸರಿ ಜಾಗತಿಕ ಬಿಸಿಲೂಡಿಕೆ ದತ್ತಾಂಶವನ್ನು ಅಕ್ಷಾಂಶ 68o ರಿಂದ 98 oE ಮತ್ತು ರೇಖಾಂಶ 8o ರಿಂದ 38 oN ದೊಳಗೆ ಭಾರತ ಮೇಲ್ಮೈಯನ್ನು ಪೂರ್ಣ ಆವರಿಸುವ 900 ಗ್ರಿಡ್‍ಗಳಿಂದ ಸಂಗ್ರಹಿಸಲಾಗುತ್ತದೆ. ಎಲ್ಲ ರಾಜ್ಯಗಳಿಗೆ ಮಾಸಿಕ ಸರಾಸರಿ ಜಾಗತಿಕ ಬಿಸಿಲೂಡಿಕೆ ನಕ್ಷೆಗಳನ್ನು ತಯಾರಿಸಲು ಒಂದು ಭೂ-ಅಂಕಿ ಅಂಶ ದ್ವಿ ರೇಖಾ ಪ್ರಕ್ಷೇಪಣ ವಿಧಾನವನ್ನು ಉಪಯೋಗಿಸಲಾಗುತ್ತದೆ.
I = (G – D)/sin Φ (2)
ಇಲ್ಲಿ G ಎಂದರೆ ಜಾಗತಿಕ ಬಿಸಿಲೂಡಿಕೆ, D ಎಂದರೆ ಪ್ರಸರಿತ ಬಿಸಿಲೂಡಿಕೆ ಮತ್ತು Φ ಎಂದರೆ ಸೂರ್ಯನನ್ನು ಎತ್ತರಿಸುವ ಕೋನ.
4.3 ಕ್ಷೇತ್ರವಾರು (Sector-wise) ವಿದ್ಯುಚ್ಛಕ್ತಿ ಬಳಕೆ
2002-03 ರಿಂದ 2010-11 ರವರೆಗೆ ಕ್ಷೇತ್ರವಾರು ವಿದ್ಯುಚ್ಛಕ್ತಿ ಬಳಕೆಯನ್ನು ಕೋಷ್ಟಕ 3 ರಲ್ಲಿ ಪಟ್ಟಿ ಮಾಡಿದೆ. ರಾಜ್ಯದ ಒಟ್ಟು ಬಳಕೆಯು 21,698.23 ಗಿ.ವ್ಯಾ.ಘಂ (2002-03) ದಿಂದ 36975.2 ಗಿ.ವ್ಯಾ.ಘಂ ಗೆ (2010-11) ಹೆಚ್ಚಳ ಕಂಡಿದೆ. ವಿವಿಧ ಕ್ಷೇತ್ರಗಳ ವಿದ್ಯುಚ್ಛಕ್ತಿ ಬಳಕೆಯ ಸಾಪೇಕ್ಷ ಹೆಚ್ಚಳವನ್ನು (2002-03 ರಿಂದ 2010-11 ರವರೆಗೆ) ಚಿತ್ರ 2 ರಲ್ಲಿ ಕಾಣಬಹುದು. ಹೀಗೆ, ಬಳಕೆಯು ಉತ್ಪಾದನೆಯನ್ನು ಮೀರಿರುವುದರಿಂದ ರಾಜ್ಯವು ಪ್ರಸ್ತುತ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ.
ಕೋಷ್ಟಕ 3: ಕ್ಷೇತ್ರವಾರು ವಿದ್ಯುಚ್ಛಕ್ತಿ ಬಳಕೆ (ಗಿ.ವ್ಯಾ.ಘಂ ಯಲ್ಲಿ)
Year | Domestic | Commercial | Agri. /Irgn. | Industry | Others | Total |
2002-03 | 4251.95 | 1162.76 | 8507.91 | 6504.78 | 1270.83 | 21698.23 |
2003-04 | 4462.13 | 1616.15 | 8992.48 | 6068.46 | 2003.95 | 23143.17 |
2004-05 | 4923.79 | 1925.48 | 9323.81 | 6470.47 | 2137.97 | 24781.52 |
2007-08 | 6322.94 | 3549.87 | 10808.65 | 6903.21 | 2403.27 | 29987.94 |
2008-09 | 6876.84 | 4014.53 | 11541.41 | 7266.81 | 2525.83 | 32225.42 |
2009-10 | 7360.09 | 4349.48 | 11894.9 | 7513.47 | 2692.39 | 33810.33 |
2010-11 | 8280.84 | 5018.51 | 12435.2 | 8442.11 | 2798.54 | 36975.2 |
(Note: Electrical energy consumption data for year 2005-06 and 2006-07 is not available)
ಚಿತ್ರ 2: 2002-03 ರಿಂದ 2010-11 ರವರೆಗಿನ ಕ್ಷೇತ್ರವಾರು ವಿದ್ಯುಚ್ಛಕ್ತಿ ಬಳಕೆ
2010-11ರಲ್ಲಿ ಕ್ಷೇತ್ರವಾರು ವಿದ್ಯುಚ್ಛಕ್ತಿ ಬಳಕೆಯನ್ನು ಚಿತ್ರ 3 ರಲ್ಲಿ ಕಾಣಬಹುದು. ಕೃಷಿ ಮತ್ತು ನೀರಾವರಿ ಪಂಪ್‍ಸೆಟ್‍ಗಳು ಬಳಕೆಯಲ್ಲಿ ಮುಂಚೂಣಿಯಲ್ಲಿದ್ದು ಶೇ. 34 ರಷ್ಟು (12435.2 ಗಿ.ವ್ಯಾ.ಘಂ) ಪಾಲು ಹೊಂದಿದ್ದು, ಕೈಗಾರಿಕಾ ರಂಗ (ಶೇ. 23, 8442.11 ಗಿ.ವ್ಯಾ.ಘಂ), ಗೃಹಬಳಕೆ (ಶೇ. 22, 8280.84 ಗಿ.ವ್ಯಾ.ಘಂ) ಮತ್ತು ವ್ಯಾಪಾರ ಕ್ಷೇತ್ರ (ಶೇ. 14, 5018.51 ಗಿ.ವ್ಯಾ.ಘಂ) ನಂತರದ ಸ್ಥಾನದಲ್ಲಿವೆ.
ಚಿತ್ರ 3: ವಿದ್ಯುಚ್ಛಕ್ತಿ ಬಳಕೆಯಲ್ಲಿ ಕ್ಷೇತ್ರವಾರು ಪಾಲು (2010-11)
ಚಿತ್ರ 4 ರಲ್ಲಿ ವಿವಿಧ ಇಂಧನ ಮೂಲಗಳ ಬಳಕೆಯ ಪಾಲನ್ನು ತೋರಿಸಿದ್ದು, ಇದರಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಉತ್ಪಾದನೆಯು ಪ್ರಧಾನ ಪಾಲು (ಶೇ. 45) ಹೊಂದಿದೆ. ನಂತರದಲ್ಲಿ ಜಲವಿದ್ಯುತ್ (ಶೇ. 27), ನವೀಕರಿಸಬಹುದಾದ ಮೂಲಗಳ ವಿದ್ಯುಚ್ಛಕ್ತಿ (ಶೇ. 24), ಡೀಸೆಲ್ ಮತ್ತು ಪರಮಾಣು ಶಕ್ತಿ ಮೂಲಗಳು ಶೇ. 4 ರಷ್ಟು ಪಾಲನ್ನು (ತಲಾ ಶೇ. 2) ಹೊಂದಿವೆ.
ಚಿತ್ರ 4: ಒಟ್ಟಾರೆ ಅಳವಡಿಸಿರುವ ಘಟಕಗಳ ಸಾಮರ್ಥ್ಯದಲ್ಲಿ ವಿವಿಧ ಶಕ್ತಿ ಮೂಲಗಳ ಪಾಲು