ಉಪ ಸಂಹಾರ
ಎಸ್‍ಪಿವಿ ಮತ್ತು ಉಷ್ಣ ವಿದ್ಯುತ್ ಪರಿವರ್ತನೆ ಮೂಲಕ ವಿಕೇಂದ್ರೀಕೃತ ವಿದ್ಯುತ್ ಉತ್ಪಾದನೆಗಾಗಿ ಸೌರ ಶಕ್ತಿಯು ಅತ್ಯಂತ ವಿಪುಲವಾಗಿ ದೊರೆಯುವ ನವೀಕರಿಸಬಹುದಾದ ಇಂಧನದ ಆಕರವಾಗಿದೆ. ಸೌರ ವಿದ್ಯುತ್ ವ್ಯವಸ್ಥೆಯ ಸಾಮರ್ಥ್ಯ ಮತ್ತು ವಿನ್ಯಾಸವನ್ನು ಲೆಕ್ಕಾಚಾರ ಹಾಕಲು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಬಳಸಿಕೊಂಡು ಬಿಸಿಲೂಡಿಕೆ ದತ್ತಾಂಶವನ್ನು ಸ್ಥಳವಿಸ್ತಾರವಾಗಿ ವಿಶ್ಲೇಷಿಸಲಾಗಿದೆ. ಪ್ರಾಯೋಗಿಕ ಅಳತೆಯೊಂದಿಗಿನ ಹೋಲಿಕೆಯು ಉತ್ತಮ ನಿಖರತೆಯನ್ನು ಸೂಚಿಸುತ್ತದೆ. ಸೌರ ಸಾಮಥ್ರ್ಯ ವಿಶ್ಲೇಷಣೆಯನ್ನು ಬಿಸಿಲೂಡಿಕೆ, ಮೇಲ್ಛಾವಣಿ ವಿಸ್ತೀರ್ಣದ ಲಭ್ಯತೆ ಆಧರಿಸಿ ಮಾಡಲಾಗಿದ್ದು, ಲಭ್ಯವಿರುವ ಮೇಲ್ಛಾವಣಿ ವಿಸ್ತೀರ್ಣದ ಶೇ. 5 ರಿಂದ 7 ರಷ್ಟರಲ್ಲಿ, ವಿಕೇಂದ್ರೀಕೃತ ವಿಧಾನದಲ್ಲಿ ಗೃಹಬಳಕೆಯ ವಿದ್ಯುತ್ ಬೇಡಿಕೆಯನ್ನು ಸಮರ್ಥವಾಗಿ ಪೂರೈಸಲು ಸಾಧ್ಯವೆಂಬುದನ್ನು ಸಾಬೀತುಪಡಿಸುತ್ತದೆ. ರಾಜ್ಯದ ಬರಡು/ಅನುಪಯುಕ್ತ ಭೂಮಿಗಳ ಒಂದಂಶ (ಶೇ. 1 ರಿಂದ 3) ಭಾಗವನ್ನು ಸಣ್ಣ-ಗ್ರಿಡ್ ವಿನ್ಯಾಸದೊಂದಿಗೆ ಎಸ್‍ಪಿವಿ ವ್ಯವಸ್ಥೆ ಬಳಸಿಕೊಂಡು ನೀರಾವರಿ ಪಂಪ್‍ಸೆಟ್ಟುಗಳ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಬಳಸಿಕೊಳ್ಳಬಹುದು. ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದಿಸಲು ಪ್ರೋತ್ಸಾಹ ನೀಡುವುದರಿಂದ ಭವಿಷ್ಯದಲ್ಲಿ ದೊಡ್ಡ ಸಂಖ್ಯೆಯ ಅಳವಡಿಕೆಗಳು ಉತ್ತೇಜನಗೊಂಡು ವಿಕೇಂದ್ರೀಕೃತ ಉತ್ಪಾದನೆಯೆಡೆಗೆ ಕೊಂಡೊಯ್ಯಲಿದ್ದು ಸಾಂಪ್ರದಾಯಿಕ ವಿದ್ಯುತ್ ಘಟಕಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುತ್ತದೆ. ವಿಕೇಂದ್ರೀಕೃತ ಸೌರವಿದ್ಯುತ್ ಘಟಕಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸುವುದರಿಂದ ಸ್ಥಳೀಯ ಕೈಗಾರೀಕರಣವನ್ನು ಉತ್ತೇಜಿಸಲಿದ್ದು, ಹೆಚ್ಚಿನ ಪ್ರಮಾಣದಲ್ಲಿರುವ ಯುವಜನತೆಗೆ ಉದ್ಯೋಗ ಸೃಷ್ಟಿಸುವುದಲ್ಲದೆ ಆ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುತ್ತದೆ. ಇಂತಹ ವಿವೇಕಯುತ ಯೋಜನೆಯು ಮಹಾತ್ಮ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ ಪರಿಕಲ್ಪನೆಯನ್ನು ನನಸು ಮಾಡುವುದಲ್ಲದೆ, ದೇಶದಲ್ಲಿ ವಿಪುಲವಾಗಿ ಲಭ್ಯವಿರುವ ಯುವಶಕ್ತಿ ಮತ್ತು ಸೌರಶಕ್ತಿಯನ್ನು ಬಳಸಿಕೊಂಡು ಪ್ರದೇಶವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯುತ್ತದೆ.