ನೈಸರ್ಗಿಕ ಸಂಪನ್ಮೂಲಗಳನ್ನು ತೊರೆದ ಬೆಂಗಳೂರಿನ ಆಧುನಿಕತೆ - ವಾಸಯೋಗ್ಯವೇ?

ರಾಮಚಂದ್ರ ಟಿ.ವಿ.* ಭರತ್ ಎಚ್. ಐತಾಳ್,  ವಿನಯ್. ಎಸ್.,  ಗಣೇಶ ಹೆಗಡೆ

ಇಂಧನ ಮತ್ತು ಜೌಗುಭೂಮಿ ಸಂಶೋಧನಾ ವಿಭಾಗ (EWRG), ಪರಿಸರ ವಿಜ್ಞಾನ ಕೇಂದ್ರ [CES],
ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು, ಕರ್ನಾಟಕ, 560 012, ಭಾರತ
*ಮಿಂಚಂಚೆ: cestvr@ces.iisc.ernet.in
ಜಾಲತಾಣ: http://ces.iisc.ernet.in/energy; http://ces.iisc.ernet.in/foss
ದೂರವಾಣಿ: 080-22933099/22933503 (ವಿಸ್ತಾರ 107)

ಉಪ ಸಂಹಾರ

ಭಾರತದ ಬಹುಪಾಲು ಕಾಡುಗಳು ದಿನದಿಂದ ದಿನಕ್ಕೆ ಕೃಷಿ ಭೂಮಿಗಳಾಗಿ, ವಸತಿ ಸಮುಚ್ಛಯಗಳಾಗಿ ಅಥವಾ ವಾಣಿಜ್ಯ ಸಂಕೀರ್ಣಗಳಾಗಿ ಬದಲಾಗುತ್ತಿವೆ. ಈ ಎಲ್ಲ ಚಟುವಟಿಕೆಗಳ ಹಿಂದೆ ತನ್ನ ಅಭಿಷ್ಟಗಳನ್ನು ಪೂರೈಸಿಕೊಳ್ಳುವ, ಐಷಾರಾಮಿ ಬದುಕನ್ನು ತನ್ನದಾಗಿಸಿಕೊಳ್ಳುವ ಮಾನವೀಯ ಯೋಜನೆಗಳಿವೆ. ವೃಕ್ಷ ಹಾಗೂ ವನ್ಯ ಸಂಕುಲದ ಮೇಲೆ ದಾಳಿ ಇದೆ ರೀತಿ ಎಗ್ಗಿಲ್ಲದೇ ಮುಂದುವರಿದರೆ, ಜಗತ್ತಿನ ಅತೀ ಬುದ್ಧಿವಂತ ಎಂದು ಬೀಗುತ್ತಿರುವ ಮನುಕುಲದ ಅಳಿವು ದೂರವಿಲ್ಲ. ಪ್ರಕೃತಿದತ್ತ ಸಂಪನ್ಮೂಲಗಳನ್ನು ಹಾಗೂ ನೈಸರ್ಗಿಕ ಸಮತೋಲವನ್ನು ಕಾಪಾಡುವುದು ಸಹ ಇದೇ ಬುದ್ಧಜೀವಿಯ ಹೊಣೆಗಾರಿಕೆ. ಅರಣ್ಯ ಸಂರಕ್ಷಣೆ ಬಹುಶ: ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಬಹುದು. ತಮ್ಮೆಲ್ಲ ಸ್ವಾರ್ಥವನ್ನು ಕ್ಷಣಕಾಲ ಬದಿಗಿಟ್ಟು ಪ್ರತಿಯೊಬ್ಬರೂ ಪ್ರಯತ್ನಿಸಿದರೆ, ಮುಂದಿನ ಪೀಳಿಗೆಗೆ ಬದುಕಲು ಬೇಕಾದ ಪರಿಶುದ್ಧ ವಾತಾವರಣವನ್ನು ಸೃಷ್ಟಿಸುವುದು ಕಷ್ಡವಾಗಲಾರದು. ಹೀಗೆ ಮಾಡಿದರೆ ನಿಸರ್ಗವೂ ಮನುಕುಲದ ತಪ್ಪನ್ನು ಕ್ಷಮಿಸಬಹುದು.

ದಶಕೂಪಸಮಾ ವಾಪೀ ದಶವಾಪೀಸಮೋ ಹೃದ: |
ದಶಹೃದಸಮ: ಪುತ್ರೋ ದಶಪುತ್ರಸಮೋ ದ್ರುಮ: ||

- ಮತ್ಸ್ಯ ಪುರಾಣ 154:512

ಹತ್ತು ಬಾವಿಗಳು ಒಂದು ಕೆರೆಗೆ ಸಮ, ಹತ್ತು ಕೆರೆಗಳಿಂದ ಒಂದು ಸರೋವರ.
ಹತ್ತು ಸರೋವರಗಳು ಒಂದು ಮಗುವಿಗೆ ಸಮ, ಹಾಗೆಯೇ ಒಂದು ವೃಕ್ಷ ಹತ್ತು ಮಕ್ಕಳಿಗೆ ಸಮ.
|| ವೃಕ್ಷೋ ರಕ್ಷತಿ ರಕ್ಷಿತ: ||