ನೈಸರ್ಗಿಕ ಸಂಪನ್ಮೂಲಗಳನ್ನು ತೊರೆದ ಬೆಂಗಳೂರಿನ ಆಧುನಿಕತೆ - ವಾಸಯೋಗ್ಯವೇ?

ರಾಮಚಂದ್ರ ಟಿ.ವಿ.* ಭರತ್ ಎಚ್. ಐತಾಳ್,  ವಿನಯ್. ಎಸ್.,  ಗಣೇಶ ಹೆಗಡೆ

ಇಂಧನ ಮತ್ತು ಜೌಗುಭೂಮಿ ಸಂಶೋಧನಾ ವಿಭಾಗ (EWRG), ಪರಿಸರ ವಿಜ್ಞಾನ ಕೇಂದ್ರ [CES],
ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು, ಕರ್ನಾಟಕ, 560 012, ಭಾರತ
*ಮಿಂಚಂಚೆ: cestvr@ces.iisc.ernet.in
ಜಾಲತಾಣ: http://ces.iisc.ernet.in/energy; http://ces.iisc.ernet.in/foss
ದೂರವಾಣಿ: 080-22933099/22933503 (ವಿಸ್ತಾರ 107)

ಮುನ್ನುಡಿ

ಅದು 70ರ ದಶಕ...
ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರು ವನರಾಶಿ, ಬಾನಾಡಿಗಳ ಚಿಲಿಪಿಲಿ, ಮನಕ್ಕೆ ಮುದನೀಡುವ ವನ್ಯಮೃಗಗಳ ಚೆಲ್ಲಾಟ, ಬಿರುಬೇಸಿಗೆಯಲ್ಲೂ ಹಿತವಾದ ತಂಗಾಳಿ, ಮುಸ್ಸಂಜೆಯ ಅವೇಶರಹಿತ ಸೂರ್ಯಾಸ್ತ, ಮಂಜಿನ ಹನಿಗಳ ನಡುವೆ ಹೊಂಬಣ್ಣದ ಸೂರ್ಯೋದಯ. ಒಂದು ನಗರ ಅದ್ಭುತ ಗಿರಿಪ್ರದೇಶವಾಗಲು ಇನ್ನೇನು ಬೇಕು..! ಮನೆ-ಮನೆಯಲ್ಲೂ ಹಣ್ಣಿನ ಮರಗಳು, ಮನೆ ಮುಂದಿನ ತುಳಸಿ ಕಟ್ಟೆಗಳು, ಕೇವಲ 20 ಅಡಿಗಳಿಗೇ ನೀರಿರುವ ಬಾವಿಗಳು, ಕೇರಿಗೊಂದು ಉದ್ಯಾನವನ, ಹತ್ತಾರು ಕೆರೆಗಳು, ಆಟದ ಬಯಲು, ದೀಪಾವಳಿಯ ದೀಪೋತ್ಸವ, ಚಳಿಗಾಲದ ಕರಗ, ಬಸವನಗುಡಿಯ ಕಡಲೆಕಾಯಿ ಪರಿಷೆ. ಹೌದು, ಇದು ಕರ್ನಾಟಕದ ರಾಜಧಾನಿ, ಕೆಂಪೇಗೌಡರ ಕನಸಿನ ನಗರ, ಬೆಂಗಳೂರಿನದೇ ವರ್ಣನೆ. ಬಹುಶ: ಈ ರೀತಿಯ ವರ್ಣನೆಯನ್ನು ಹಿರಿಯರಿಂದ ಅಥವಾ ಪತ್ರಿಕೆಗಳಲ್ಲಿ ಲೆಕ್ಕವಿಲ್ಲದಷ್ಟು ಸಲ ಕೇಳಿದ್ದೇವೆ, ಓದಿದ್ದೇವೆ. ಪ್ರಸ್ತುತ ಬೆಂಗಳೂರು ನಗರವನ್ನು ಆ ರೀತಿಯಾಗಿ ಕಲ್ಪಸಿಕೊಳ್ಳಲು ಒದ್ದಾಡಿದ್ದೇವೆ, ಅಂತಹುದೇ ನಗರದಲ್ಲಿರಬೇಕೆಂದು ಬಯಸಿದ್ದೇವೆ. ಎಲ್ಲವೂ ಕ್ಷಣಕಾಲ. ಮನಸ್ಸು ಕಲ್ಪನೆಯ, ಭಾವಪರವಶತೆಯ ಲೋಕದಿಂದ ಮರಳುತ್ತಿದ್ದಂತೆ ಸುತ್ತಲಿನ ಕಲ್ಮಷಪೂರ್ಣ ಗಾಳಿಯೇ ಪ್ರಾಣವಾಯು, ವಾಹನಗಳ ಘರ್ಜನೆಯೇ ಇಂಪಾದ ಹಕ್ಕಿಗಳ ಕೂಗು, ಯಾಂತ್ರಿಕ ಜಗತ್ತೇ ಸರ್ವಸ್ವ.


21ನೇ ಶತಮಾನದ ಬೆಂಗಳೂರು: ಅನಾಗರೀಕ ನಗರೀಕರಣದ ಉಡುಗೊರೆ..!


ಬದಲಾವಣೆ ನಿಸರ್ಗದ ನಿಯಮ, ನಿಜ. ಆದರೆ ಬದಲಾವಣೆಗೆ ಕಾರಣ ಯಾರು ಎಂಬುದೂ ಅಷ್ಟೇ ಮುಖ್ಯ. ಇದಕ್ಕೆ ಪ್ರಕೃತಿಯೇ ಕಾರಣವಾವಾಗಿದ್ದರೆ, ಅದು ಸಹಜ ಹಾಗೂ ಪ್ರಶ್ನಾತೀತ. ಆದರೆ ಬೆಂಗಳೂರಿನ ಬದಲಾವಣೆ ಇದಕ್ಕೆ ಮೀರಿದ್ದು, ಇದರ ಹಿಂದೆ ಪಾಶವೀ ಮಾನವೀಯ ಚಟುವಟಿಕೆಗಳು ಅವಿಶ್ರಾಂತವಾಗಿ ನಡೆದಿವೆ, ನಡೆಯುತ್ತಿವೆ. ಇದರ ಪರಿಣಾಮವೇ ಇಂದಿನ ಭಾವಹೀನ ಸಿಲಿಕಾನ್ ಸಿಟಿ. ಕೇವಲ ಮೂರೇ ದಶಕಗಳಲ್ಲಿ ‘ಗಾರ್ಡನ್ ಸಿಟಿ’ಯನ್ನು ‘ಗಾರ್ಬೇಜ್ ಸಿಟಿ’ಯಾಯಿತು. ವನ್ಯ ಸಂಕುಲಗಳು ಕಣ್ಮರೆಯಾಗಿ ವಸತಿ ಸಮುಚ್ಛಯಗಳು ತಲೆಎತ್ತಿದವು, ವಾಣಿಜ್ಯ ಸಂಕೀರ್ಣಗಳು ಆಟದ ಬಯಲನ್ನಾಕ್ರಮಿಸಿದವು. ಕೆರೆಗಳು ನಗರದ ಕಸದ ತೊಟ್ಟಿಗಳಾದವು. ಸೂರ್ಯಾಸ್ತ ಸೂರ್ಯೋದಯಗಳು ಬಹುಮಹಡಿ ಕಟ್ಟಡಗಳ ಹಿಂದೆ ಕಾಣದಾದವು. ಮಾಹಿತಿ ತಂತ್ರಜ್ಞಾನ, ಕೈಗಾರಿಕೆಗಳು ಹಾಗೂ ಸ್ಥಿರಾಸ್ತಿ ವ್ಯವಹಾರ ಬೆಂಗಳೂರನ್ನೇ ಆಳಿದವು. ನಗರೀಕರಣದ ಬಿಸಿಲುಗುದುರೆಯನ್ನೇರಿದ ಮಾನವ ಸ್ವಯಂಕೃತ ಪ್ರಮಾದದ ಮೂಕಪ್ರೇಕ್ಷಕನಾದನು, ಭ್ರಮಾಲೋಕದ ಅಲೆಮಾರಿಯಾದನು, ಯಾಂತ್ರಿಕ ಜಗತ್ತಿನ ಬಂಧಿಯಾದನು ಹಾಗೂ ಏಕಾಂಗಿಯಾದನು.
ಪರಿಶುದ್ಧ ಕುಡಿಯುವ ನೀರು, ಕಲ್ಮಷರಹಿತ ಗಾಳಿ, ಬದುಕಿಗೆ ಅಗತ್ಯವಾದ ಮೂಲಭೂತ ಸಾಮಾಜಿಕ ಮತ್ತು ಸಾಂಸ್ಕøತಿಕ ರಚನೆಗಳು ಹಾಗೂ ವಯಕ್ತಿಕ ಭದ್ರತೆ, ಒಂದು ಪ್ರದೇಶವನ್ನು ವಾಸಯೋಗ್ಯ ತಾಣವನ್ನಾಗಿ ಮಾಡುತ್ತವೆ. ಪ್ರಸ್ತುತ ಬೆಂಗಳೂರಿನಲ್ಲಿ ಅಂತರ್ಜಲದ ಮಟ್ಟ 800ರಿಂದ 1000 ಅಡಿಗಳಿಗೆ ಕುಸಿದಿದೆ. ಅಲ್ಲಿ ದೊರೆಯುವ ನೀರು ಪ್ಲೋರೈಡ್ ಮತ್ತಿತರ ಹಾನಿಕಾರಕ ಖನಿಜಯುಕ್ತವಾಗಿದೆ. ಭೂ ಮೇಲ್ಮೈನ ಎಲ್ಲಾ ಜಲಮೂಲಗಳೂ ಕಲುಷಿತಗೊಂಡಿವೆ. ಬಹುತೇಕ ಕೆರೆಗಳು ಘನ ಹಾಗೂ ದ್ರವ ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿವೆ. ಕೆಲವು ಕೆರೆಗಳು ಭೂಗಳ್ಳರಿಂದ ಆಕ್ರಮಿಸಲ್ಪಟ್ಟು, ಅವರ ಜೇಬನ್ನು ಭಾರವಾಗಿಸಿವೆ. ಅವೈಜ್ಞಾನಿಕ, ಅನಾಗರೀಕ ಘನತ್ಯಾಜ್ಯ ನಿರ್ವಹಣೆಯಿಂದ ನಗರದ ಬೀದಿಗಳು ಕೊಳೆತು ನಾರುತ್ತಿವೆ. ಅಸಾಂಪ್ರದಾಯಿಕ ಕಟ್ಟಡಗಳು ಹೆಚ್ಚು ಹೆಚ್ಚು ಶಾಖವನ್ನು ಹೀರಿ ನಗರವನ್ನು ಉಷ್ಣ ದ್ವೀಪವನ್ನಾಗಿ ಮಾಡಿವೆ. ವಾತಾವರಣದ ತಾಪಮಾನ ತೀವ್ರವಾಗಿ ಬದಲಾಗಿದೆ. ನಿಷ್ಕಲ್ಮಷ ಪ್ರಾಣವಾಯು ಇಲ್ಲದಾಗಿದೆ. ಇವೆಲ್ಲದರ ಪರಿಣಾಮ ನಗರವಾಸಿಗಳು ಕ್ರಮೇಣ ಧೂರ್ತ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಅಪರಾಧದ ಪ್ರಮಾಣ ಹೆಚ್ಚಾಗುತ್ತಿದೆ. ಯುವಜನಾಂಗದಲ್ಲಿ ಬಂಜೆತನ ಅಧಿಕವಾಗುತ್ತಿದೆ. ಮಾನವೀಯ ಸಂಬಂಧಗಳು ಕೃತಕವಾಗಿ, ಮುರಿದು ಬೀಳುತ್ತಿವೆ. ವಿವಾಹ ವಿಚ್ಛೇದನಗಳು ಸಾಮಾನ್ಯವಾಗಿವೆ. ವನುಷ್ಯರಲ್ಲಿ ರಾಕ್ಷಸೀ ಭಾವ ಜಾಗೃತವಾಗುತ್ತಿದೆ. ಈ ಎಲ್ಲ ಲಕ್ಷಣಗಳೂ ಒಂದು ಪ್ರದೇಶದ ನಾಗರೀಕತೆಯ ಅವಸಾನದ ಲಕ್ಷಣಗಳು. ಹಾಗೆಯೇ, ಇವೆಲ್ಲವೂ ಬೆಂಗಳೂರಿನ ಲಕ್ಷಣಗಳೂ ಕೂಡ..! ಅಂದರೆ, ಬಹುಶ: ಬೆಂಗಳೂರು ಅವಸಾನದ ಅಂಚಿನಲ್ಲಿದೆ. ಅನಾಗರೀಕ ನಗರೀಕರಣವೆಂಬ ರೋಗದಿಂದ ಬಳಲುತ್ತಿರುವ ಎಲ್ಲಾ ಮಹಾನಗರಗಳೂ ವಿನಾಶಕ್ಕೆ ನಾಂದಿ ಹಾಡಿವೆ. ಬೆಂಗಳೂರಿಗರು ಉಸಿರು ಬಿಗಿಹಿಡಿದು ಬದುಕುತ್ತಿದ್ದಾರೆ. ಬೇರೆಯವರನ್ನು ದೂರೋಣವೆಂದರೆ ನಾವೇ ಮಾಡಿದ ತಪ್ಪು. ಪ್ರಕೃತಿಯ ಮೇಲಿನ ಅತ್ಯಾಚಾರ, ಸ್ವರ್ಗದಂತಿದ್ದ ಇಳೆಯನ್ನು ನರಕವಾಗಿಸಿದೆ, ಅನುಭವಿಸಲೇಬೇಕು. ಆದರೂ ಎಲ್ಲಾ ತಾಯಿಯರಂತೆ ನಿಸರ್ಗವೂ ನಮಗೆ ಇನ್ನೊಂದು ಅವಕಾಶವನ್ನು ಕೊಡಬಹುದು. ಅದರ ಸದುಪಯೋಗ ಪಡೆಯಲು ಪರಿಸರದ ವಸ್ತುಸ್ಥಿತಿಯ ವೈಜ್ಞಾನಿಕ ವಿಶ್ಲೇಷಣೆ ಅಗತ್ಯ.
ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರಿನ ವೃಕ್ಷಗಳ ಕುರಿತು ನಾವು ನಡೆಸಿದ ವೈಜ್ಞಾನಿಕ ಅಧ್ಯಯನವು, ನಗರದ ಭೀಕರತೆಯನ್ನೂ, ಅತೀ ಕಡಿಮೆ ಮರ ಸಾಂದ್ರತೆಯನ್ನೂ (ಪ್ರತಿ ವ್ಯಕ್ತಿಗೆ ಕೇವಲ 0.14 ಮರದ ಲಭ್ಯತೆ) ಮತ್ತು ಭವಿಷ್ಯದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಮೇಲೂ ಬೆಳಕು ಚೆಲ್ಲುತ್ತದೆ. ಬೆಂಗಳೂರಿನ ಪ್ರತಿಯೊಬ್ಬ ನಿವಾಸಿಯೂ ಒಂದು ಮರವನ್ನು ನೆಟ್ಟು ಬೆಳೆಸಿದಲ್ಲಿ, ಕಳೆದು ಹೋದ ಉದ್ಯಾನ ನಗರದ ವೈಭವತೆಯನ್ನು ಮರಳಿ ಪಡೆಯಬಹುದು. ಮುಂದಿನ ಪೀಳಿಗೆಗೆ ಕಲ್ಮಷ ರಹಿತ ಪರಿಸರವನ್ನು ಕೊಡುಗೆಯನ್ನಾಗಿ ನೀಡಬಹುದು ಹಾಗೂ ಮುಖ್ಯವಾಗಿ ನಮ್ಮ ಪಾಪಪ್ರಜ್ಞೆಯಿಂದ ಹೊರಬಂದು ನೆಮ್ಮದಿಯ ಜೀವನ ಸಾಗಿಸಬಹುದು.