ಅದು 70ರ ದಶಕ...
ಎಲ್ಲಿ ನೋಡಿದರಲ್ಲಿ ಹಸಿರು ವನರಾಶಿ, ಪಕ್ಷಿಗಳ ಚಿಲಿಪಿಲಿ, ಕಣ್ಣಿಗೆ ಮುದನೀಡುವ ವನ್ಯಮೃಗಗಳ ಚೆಲ್ಲಾಟ, ಬಿರುಬೇಸಿಗೆಯಲ್ಲೂ ಹಿತವಾದ ತಂಗಾಳಿ, ಮುಸ್ಸಂಜೆಯ ಅವೇಶರಹಿತ ಸೂರ್ಯಾಸ್ತ, ಮಂಜಿನ ಹನಿಗಳ ನಡುವೆ ಹೊಂಬಣ್ಣದ ಸೂರ್ಯೋದಯ. ಒಂದು ನಗರ ಅದ್ಭುತ ಗಿರಿಪ್ರದೇಶವಾಗಲು ಇನ್ನೇನು ಬೇಕು..! ಮನೆ-ಮನೆಯಲ್ಲೂ ಹಣ್ಣಿನ ಮರಗಳು, ಮನೆ ಮುಂದಿನ ತುಳಸಿ ಕಟ್ಟೆಗಳು, ಕೇವಲ 20 ಅಡಿಗಳಿಗೇ ನೀರಿರುವ ಬಾವಿಗಳು, ಕೇರಿಗೊಂದು ಉದ್ಯಾನವನ, ಹತ್ತಾರು ಕೆರೆಗಳು, ಆಟದ ಬಯಲು, ದೀಪಾವಳಿಯ ದೀಪೋತ್ಸವ, ಚಳಿಗಾಲದ ಕರಗ, ಬಸವನಗುಡಿಯ ಕಡಲೆಕಾಯಿ ಪರಿಷೆ. ಹೌದು, ಇದು ಕರ್ನಾಟಕದ ರಾಜಧಾನಿ, ಕೆಂಪೇಗೌಡರ ಕನಸಿನ ನಗರ, ಬೆಂಗಳೂರಿನದೇ ವರ್ಣನೆ. ಬಹುಶ: ಈ ರೀತಿಯ ವರ್ಣನೆಯನ್ನು ಹಿರಿಯರಿಂದ ಅಥವಾ ಪತ್ರಿಕೆಗಳಲ್ಲಿ ಲೆಕ್ಕವಿಲ್ಲದಷ್ಟು ಸಲ ಕೇಳಿದ್ದೇವೆ, ಒದಿದ್ದೇವೆ. ಪ್ರಸ್ತುತ ಬೆಂಗಳೂರು ನಗರವನ್ನು ಆ ರೀತಿಯಾಗಿ ಕಲ್ಪಸಿಕೊಳ್ಳಲು ಒದ್ದಾಡಿದ್ದೇವೆ, ಅಂತಹುದೇ ನಗರದಲ್ಲಿರಬೇಕೆಂದು ಬಯಸಿದ್ದೇವೆ. ಎಲ್ಲವೂ ಕ್ಷಣಕಾಲ. ಮನಸ್ಸು ಕಲ್ಪನೆಯ, ಭಾವಪರವಶತೆಯ ಲೋಕದಿಂದ ಮರಳುತ್ತಿದ್ದಂತೆ ಸುತ್ತಲಿನ ಹೊಗೆಸಹಿತ ಗಾಳಿಯೇ ಪ್ರಾಣವಾಯು, ವಾಹನಗಳ ಘರ್ಜನೆಯೇ ಇಂಪಾದ ಹಕ್ಕಿಗಳ ಕೂಗು, ಯಾಂತ್ರಿಕ ಜಗತ್ತೇ ಸರ್ವಸ್ವ.
21ನೇ ಶತಮಾನದ ಬೆಂಗಳೂರು:ಅನಾಗರೀಕ ನಗರೀಕರಣದ ಉಡುಗೊರೆ..!
ಬದಲಾವಣೆ ನಿಸರ್ಗದ ನಿಯಮ, ನಿಜ. ಆದರೆ ಬದಲಾವಣೆಗೆ ಕಾರಣ ಯಾರು ಎಂಬುದೂ ಅಷ್ಟೇ ಮುಖ್ಯ. ಇದಕ್ಕೆ ಪ್ರಕೃತಿಯೇ ಕಾರಣವಾವಾಗಿದ್ದರೆ, ಅದು ಸಹಜ ಹಾಗೂ ಪ್ರಶ್ನಾತೀತ. ಆದರೆ ಬೆಂಗಳೂರಿನ ಬದಲಾವಣೆ ಇದಕ್ಕೆ ಮೀರಿದ್ದು, ಇದರ ಹಿಂದೆ ಪಾಶವೀ ಮಾನವೀಯ ಚಟುವಟಿಕೆಗಳು ಅವಿಶ್ರಾಂತವಾಗಿ ನಡೆದಿವೆ, ನಡೆಯುತ್ತಿವೆ. ಕೇವಲ ಮೂರೇ ದಶಕಗಳಲ್ಲಿ ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿಯನ್ನಾಗಿಸಿದವು. ವನ್ಯ ಸಂಕುಲಗಳು ನಾಶಗೊಂಡು ವಸತಿ ಸಮುಚ್ಛಯಗಳು ತಲೆಎತ್ತಿದವು, ವಾಣಿಜ್ಯ ಸಂಕೀರ್ಣಗಳು ಆಟದ ಬಯಲನ್ನಾಕ್ರಮಿಸಿದವು. ಕೆರೆಗಳು ನಗರದ ಕಸದ ತೊಟ್ಟಿಗಳಾದವು. ಸೂರ್ಯಾಸ್ತ ಸೂರ್ಯೋದಯಗಳು ಬಹುಮಹಡಿ ಕಟ್ಟಡಗಳ ಹಿಂದೆ ಕಾಣದಾದವು. ಮಾಹಿತಿ ತಂತ್ರಜ್ಞಾನ, ಕೈಗಾರಿಕೆಗಳು ಹಾಗೂ ಸ್ಥಿರಾಸ್ತಿ ವ್ಯವಹಾರ ಬೆಂಗಳೂರನ್ನೇ ಆಳಿದವು. ನಗರೀಕರಣದ ಬಿಸಿಲುಗುದುರೆಯನ್ನೇರಿದ ಮಾನವ ಸ್ವಯಂಕೃತ ಪ್ರಮಾದದ ಮೂಕಪ್ರೇಕ್ಷಕನಾದನು, ಭ್ರಮಾಲೋಕದ ಅಲೆಮಾರಿಯಾದನು, ಯಾಂತ್ರಿಕ ಜಗತ್ತಿನ ಬಂಧಿಯಾದನು ಹಾಗೂ ಏಕಾಂಗಿಯಾದನು.
ದಶಕೂಪಸಮಾ ವಾಪೀ ದಶವಾಪೀಸಮೋ ಹೃದ: |
ದಶಹೃದಸಮ: ಪುತ್ರೋ ದಶಪುತ್ರಸಮೋ ದ್ರುಮ: ||
-ಮತ್ಸ್ಯ ಪುರಾಣ 154:512
ಹತ್ತು ಬಾವಿಗಳು ಒಂದು ಕೆರೆಗೆ ಸಮ, ಹತ್ತು ಕೆರೆಗಳಿಂದ ಒಂದು ಸರೋವರ.
ಹತ್ತು ಸರೋವರಗಳು ಒಂದು ಮಗುವಿಗೆ ಸಮ, ಹಾಗೆಯೇ ಒಂದು ವೃಕ್ಷ ಹತ್ತು ಮಕ್ಕಳಿಗೆ ಸಮ.
|| ವೃಕ್ಷೋ ರಕ್ಷತಿ ರಕ್ಷಿತ: ||