Sahyadri ENews: LXVIII
CARRYING CAPACITY BASED CONSERVATION AND SUSTAINABLE MANAGEMENT OF RIVERINE ECOSYSTEMS PAPER PRESENTED IN LAKE 2018, [THE 11TH BIENNIAL LAKE CONFERENCE], 22-25th November 2018

Issues: 1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67

ಪಶ್ಚಿಮಘಟ್ಟ ಉಳಿಸಿ-ನದೀ ಅರಣ್ಯಗಳನ್ನು ಸಂರಕ್ಷಿಸಿ. ರಾಷ್ಟ್ರೀಯ ಕೆರೆ ಸಮ್ಮೇಳನ ಮೂಡಬಿದ್ರಿ 22-24 ನವೆಂಬರ 2018 (PDF)

ಶ್ರೀ ಅನಂತ ಹೆಗಡೆ
ಅಶೀಸರ ಅಧ್ಯಕ್ಷರು ವೃಕ್ಷಲಕ್ಷ ಆಂದೋಲನ ಕರ್ನಾಟಕ,
ಮಾಜಿ ಉಪಾಧ್ಯಕ್ಷರು ರಾಜ್ಯ ಔಷಧೀ ಮೂಲಿಕಾ ಪ್ರಾಧಿಕಾರ ಮಾಜಿ ಉಪಾಧ್ಯಕ್ಷರು,
ರಾಜ್ಯ ಜೀವ ವೈವಿದ್ಯ ಮಂಡಳಿ ನಿಕಟಪೂರ್ವ ಉಪಾಧ್ಯಕ್ಷರು ರಾಜ್ಯ ವನ್ಯಜೀವಿ ಮಂಡಳಿ
ಮೊ: 9481135153 ಪೋನ್: 08384-279445.


ಜಲ ಅಕ್ಷಯ ಪಾತ್ರೆ:  ಪಶ್ಚಿಮಘಟ್ಟ ಜಗತ್ತಿನಲ್ಲಿ ಅನನ್ಯವಾದ ಜಲ ಅಕ್ಷಯಪಾತ್ರೆ. 22 ಜೀವ ನದಿಗಳು, 180 ಉಪನದಿಗಳು, ಸಾವಿರಾರು ಹೊಳೆ-ಹಳ್ಳಗಳು, ಸುಮಾರು 10,000 ಸಣ್ಣ – ದೊಡ್ಡ ಕೆರೆಗಳು ಇಲ್ಲಿವೆ. ಅರಣ್ಯಗಳಿಂದ ಆವೃತವಾದ ನದೀ ಕಣಿವೆಗಳು ದಕ್ಷಿಣ ಭಾರತದ ಆಹಾರ ಸುರಕ್ಷತೆಗೆ ಆಧಾರ ಸ್ತಂಭ.ಇಲ್ಲಿನ ದೇವರ ಕಾಡುಗಳು, ರಾಂಪತ್ರೆ ಜಡ್ಡಿಗಳು, ಔಷಧೀ ಸಸ್ಯಗಳ ತಾಣಗಳು, ಕಾಂಡ್ಲಾವನಗಳು, ಸೀತಾ ಅಶೋಕಾ, ಮರ ಅರಿಶಿಣದಂಥ ಅಪರೂಪದ ಸಸ್ಯ ರಾಶಿ ಇಲ್ಲಿ ಮಾತ್ರ ಉಳಿದುಕೊಂಡಿವೆ.ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಇರುವ ರಾಜ್ಯಗಳಲ್ಲಿ ಕರ್ನಾಟಕದಲ್ಲೇ ನದೀ ಕಣಿವೆ ಅರಣ್ಯಗಳು ಹೆಚ್ಚು ಸಂರಕ್ಷಣೆಗೆ ಒಳಪಟ್ಟಿವೆ, ದಟ್ಟವಾಗಿವೆ.

ಅರಣ್ಯ ನಾಶ ತಡೆಯಲು ಪಶ್ಚಿಮಘಟ್ಟ ಉಳಿಸಿ ಅಭಿಯಾನ:  ಆದಾಗ್ಯೂ ಕಳೆದ 50 ವರ್ಷಗಳಲ್ಲಿ ಕರ್ನಾಟಕದ ಪಶ್ಚಿಮಘಟ್ಟದಲ್ಲಿ ಮಾನವ ಹಸ್ತಕ್ಷೇಪ ಮಿತಿ ಮೀರಿದೆ. ಸುಮಾರು 10 ಲಕ್ಷ ಹೆಕ್ಟೇರ್ ಅರಣ್ಯ ನಾಶವಾಗಿದೆ. ಈ ಹಿನ್ನೆಲೆಯಲ್ಲಿ 30 ವರ್ಷ ಹಿಂದೆ ಪಶ್ಚಿಮಘಟ್ಟ ಉಳಿಸಿ ಆಂದೋಲನವನ್ನು ನಾವು ಪ್ರಾರಂಭಿಸಿದೆವು. 1987-88 ರಲ್ಲಿ 5 ರಾಜ್ಯಗಳ ವ್ಯಾಪ್ತಿಯಲ್ಲಿ ನೂರಾರು ಸಂಸ್ಥೆಗಳ ಕಾರ್ಯಕರ್ತರು ಸೇರಿ 100 ದಿನಗಳ ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆ ಸಂಘಟಿಸಿದ್ದೆವು. ಸಹ್ಯಾದ್ರಿಯ ಉಳಿವಿಗೆ ನಡೆದ ಬಹು ವ್ಯಾಪಕ ಜನ ಜಾಗೃತಿ ಅಭಿಯಾನ ಅದಾಗಿತ್ತು. ಡಾ|| ಶಿವರಾಮ ಕಾರಂತ, ಡಾ|| ಮಾಧವ ಗಾಡ್ಗೀಳ್, ಪೂಜ್ಯ ಪೇಜಾವರ ಸ್ವಾಮೀಜಿ ಸೇರಿ ನಾಡಿನ ಸಾವಿರಾರು ಪ್ರಜ್ಞಾವಂತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

30ನೇ ವರ್ಷ ಆಚರಣೆ:  ಇದೀಗ ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಯ 30ನೇ ವರ್ಷ ಆಚರಣೆ ಮುಕ್ತಾಯ ಹಂತದಲ್ಲಿದೆ. ಈಗಾಗಲೇ 2017 ರಲ್ಲಿ ನವೆಂಬರ್ 1 ರಂದು ಕನ್ಯಾಕುಮಾರಿಯಲ್ಲಿ ಪಾದಯಾತ್ರೆಯ ನೆನಪು ಕಾರ್ಯಕ್ರಮ ನಡೆದಿದೆ. ಕರ್ನಾಟಕದಲ್ಲಿ ತಲಕಾವೇರಿಯಲ್ಲಿ 2017 ರ ಡಿಸೆಂಬರ 15 ರಂದು ಪಾದಯಾತ್ರೆಯ 30ನೇ ವರ್ಷಾಚರಣೆ ಕಾರ್ಯಕ್ರಮ ನಡೆಸಿದ್ದೆವು. ಪಶ್ಚಿಮಘಟ್ಟ ಉಳಿಸಿ ಸಮಾವೇಶ ಸಾಗರ, ಶಿರಸಿ, ಶಿವಮೊಗ್ಗಾಗಳಲ್ಲಿ 2018 ರ ಫೆಬ್ರವರಿ, ಜುಲೈ, ನವೆಂಬರ್‍ನಲ್ಲಿ ನಡೆದವು.

ನಿರಂತರ ಆಂದೋಲನಗಳು:  ಪಶ್ಚಿಮ ಘಟ್ಟದಲ್ಲಿ ನಿರಂತರ ಆಂದೋಲನಗಳು ನಡೆಯುತ್ತಿವೆ. ಬೇಡ್ತಿ, ಅಘನಾಶಿನಿ, ಶರಾವತಿ, ಕೈಗಾ, ಭದ್ರಾ ಕಣಿವೆ, ನೇತ್ರಾವತಿ, ಬರ್ಪೊಳೆ, ಕುಮಾರಧಾರಾ, ಬಿಸಗೋಡ, ಕುದುರೆಮುಖ, ಹೊಗ್ರೆಕಾನುಗಿರಿ, ಅಂಬಾರ ಗುಡ್ಡ, ಹೀಗೆ ನೂರಾರು ಅರಣ್ಯ, ನದಿ ಕಣಿವೆ ಉಳಿಸಿ ಅಭಿಯಾನಗಳು ನಡೆದಿವೆ. ಕೇಂದ್ರ ಸರ್ಕಾರ ಡಾ|| ಮಾಧವ್ ಗಾಡ್ಗೀಳ್ ಸಮೀತಿಯನ್ನು ಪಶ್ಚಿಮಘಟ್ಟ ರಕ್ಷಣೆ ಸಲುವಾಗಿ ರಚಿಸಿತ್ತು. ರಾಜ್ಯ ಸರ್ಕಾರ ಪಶ್ಚಿಮ ಘಟ್ಟ ಕಾರ್ಯಪಡೆ ರಚಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಹಲವು ಹೋರಾಟಗಳು: 1987-88 ರ ಪಾದಯಾತ್ರೆ ನಂತರ 1991 ರಲ್ಲಿ ಪಶ್ಚಿಮಘಟ್ಟ ಸಂಪರ್ಕ ಅಭಿಯಾನ ನಡೆಸಿದ್ದನ್ನು ನೆನಪಿಸಲಾಗಿದೆ. ಆನಂತರದ ವರ್ಷಗಳಲ್ಲಿ ಪಶ್ಚಿಮಘಟ್ಟ ಉಳಿಸಿ ಆಂದೋಲನದ ಅಡಿ ಹಲವು ಪರಿಸರ ಸಂಸ್ಥೆ-ವೇದಿಕೆಗಳು ಸೇರಿ ಹಲವು ಜನಾಂದೋಲನಗಳನ್ನು ನಡೆಸಿವೆ. 1980-90 ರ ದಶಕದಲ್ಲಿ ಗ್ರಾಮ ಸಾಮಾಹಿಕ ಭೂಮಿ ಉಳಿಸಿ ಚಳುವಳಿ ವ್ಯಾಪಕ ಜಾಗೃತಿಗೆ ಕಾರಣವಾಯಿತು. 1990 ರ ದಶಕದಲ್ಲಿ ಕಾಳಿ ಬಿಸಗೋಡ ಗಣಿಗಾರಿಕೆ, ಕುದುರೇಮುಖ ಗಣಿಗಾರಿಕೆ ವಿರುದ್ಧ ಬೃಹತ್ ಜನಾಂದೋಲನ ನಡೆದು ಯಶಸ್ವಿಯಾಯಿತು. ಕೈಗಾ ಅಣುಸ್ಥಾವರದ ಆರಂಭಕ್ಕೆ ಮೊದಲೇ ಶುರುವಾದ ಜಾಗೃತಿ ಅಭಿಯಾನ 2017 ರಲ್ಲೂ ಮುಂದುವರೆದಿದೆ. 1980 ರಿಂದ 90 ರ ದಶಕದಲ್ಲಿ ಬೇಡ್ತಿ. ಅಘನಾಶಿನಿ ಭದ್ರಾ ಮೇಲ್ದಂಡೆ ಆಣೆಕಟ್ಟು ವಿರೋಧಿಸಿ ನಡೆದ ಬೃಹತ್ ಚಳುವಳಿ ಯಶ ಪಡೆದವು. ಪಶ್ಚಿಮಘಟದಲ್ಲಿ ನದೀ ತಿರುವು ನದೀ ಜೋಡಣೆ ಯೋಜನೆಗಳು ಭಾರೀ ಅರಣ್ಯ ನಾಶಕ್ಕೆ ಕಾರಣವಾಗಲಿವೆ” ಎಂದು ಛಳುವಳಿ ನಡೆದವು. ಕೆರೆ, ಹಳ್ಳ, ಕಾನು ಉಳಿಸಿ ಅಭಿಯಾನ ಇದೀಗ 10 ವರ್ಷಗಳಿಂದ ಪಶ್ಚಿಮಘಟ್ಟ ಘಟ್ಟದಲ್ಲಿ ನಡೆದಿದೆ. ನೆಡದಿರಿ ನೀಲಗಿರಿ ಎಂದು 1980 ರ ದಶಕದಲ್ಲಿ ಜಾಥಾಗಳು ನಡೆದವು. ಕಳೆದ 10 ವರ್ಷಗಳಲ್ಲಿ ಅಕೇಶಿಯಾ ನಿಷೇಧಕ್ಕೆ ಹಕ್ಕೊತ್ತಾಯ ನಡೆದಿದೆ.

ಪಶ್ಚಿಮ ಘಟ್ಟದಲ್ಲಿ ಕಳೆದ 3 ವರ್ಷಗಳಲ್ಲಿ ನಡೆದ ವೈವಿಧ್ಯಮಯ ಕಾರ್ಯಕ್ರಮಗಳ ಸ್ಯಾಂಪಲ್ಸ್ ಕೆಳಗೆ ಇದೆ.: ಶಿವಮೊಗ್ಗದಲ್ಲಿ, ಯಡಳ್ಳಿಯಲ್ಲಿ ಆಲೆಮನೆ ಅಸ್ತ್ರ ಒಲೆ ನಿರ್ಮಾಣ, ಕುಮಾರಧಾರ, ಗಣೇಶ್‍ಪಾಲ್ ಛಳುವಳಿ, ಬೆಟ್ಟ ಅಭಿವೃದ್ಧಿ ಪುಸ್ತಕ ಬಿಡುಗಡೆ, ಮುಂಗಾರು ಪರಿಸರ ಉತ್ಸವ, ಬೆಂಗಳೂರಲ್ಲಿ ಹಕ್ಕೊತ್ತಾಯ, ಫಲ ವೃಕ್ಷಾರೋಪಣ, ಬಯೋಗ್ಯಾಸ್ ತರಬೇತಿ, ಕಲ್ಲಬ್ಬೆ ಕಸಿ ಶಿಬಿರ, ಫಲ ವೃಕ್ಷಮೇಳ ಸಾಗರ, ಹಲಸಿನಮೇಳ, ಬಿಕ್ಕ ಮಗಳೂರು ಅರಣ್ಯ ಪರಿಸ್ಥಿತಿ ವರದಿಬಿಡುಗಡೆ, ಮಲೆನಾಡಲ್ಲಿ ಅರಣ್ಯದಲ್ಲಿ ಶುಂಠಿ ಬೇಸಾಯದಿಂದ ಆಗಿರುವ ಅನಾಹುತಗಳ ಬಗ್ಗೆ ಜಾಗೃತಿ, ಗದಗ ಕಪ್ಪತ ಗುಡ್ಡ ಉಳಿಸಿ,ಅರಣ್ಯ ಕಾಯಿದೆ. ತಿದ್ದುಪಡಿ ವಿಚಾರ ಸಂಕೀರ್ಣ, ಕುಮಟಾ ಹೈವೇ ಮರ ನಾಶ ವಿರುದ್ಧ ಹೋರಾಟ, ಮಾರ್ಕಂಡೇಯ ನದೀ ಸಮೀಕ್ಷೆ, ಕಾರವಾರ ಹಕ್ಕೊತ್ತಾಯ, ತೋಟದ ಕೊಪ್ಪ ಕಾನು ಉಳಿಸಿ, ಘಟ್ಟದಲ್ಲಿನ ಸೋಲಾರ ಗ್ರಾಮ ಕಾರ್ಗಡಿ ಘೋಷಣೆ, ಭಟ್ಕಳ, ಎಂಡೋಸಲ್ಪಾನ್ ಪೀಡಿತರ ಸಮಸ್ಯೆ ಪರಿಹಾರ, ಬೆಂಗಳೂರಿನಲ್ಲಿ ಪಶ್ಚಿಮಘಟ್ಟ ಸಭೆ, ಹಸಿರು ಆರೋಗ್ಯ ಶಿಬಿರ, ಸಸ್ಯ ಲೋಕದಲ್ಲಿ ವಿಧ್ಯಾರ್ಥಿ ಶಿಬಿರ, ಕಾಡಿನ ಜೇನು ಉಳಿಸಿ ಶಿಬಿರ, ಶಿವಮೊಗ್ಗಾ ಹಕ್ಕೊತ್ತಾಯ, ಮುಂಡಿಗೆಜಡ್ಡಿ ಉಳಿಸಿ, ಕೆರೆ ಸಂರಕ್ಷಣೆ ಅಧ್ಯಯನ, ಸಮೀಕ್ಷೆ ಕೆರೆ ಪುನಶ್ಚೇತನ ಯೋಜನೆ ಕೆರೆ ಸಮ್ಮೇಳನ, ಎತ್ತಿನ ಹೊಳೆ ಅಧ್ಯಯನ ವರದಿ ಪುತ್ತೂರಲ್ಲಿ ಬಿಡುಗಡೆ, ವನವಾಸಿ ಶಿಬಿರ ಉತ್ತರಕೊಪ್ಪ, ತದಡಿ ಅಧ್ಯಯನ ವರದಿ ಜಾಗೃತಿ, ಜೀವ ವೈವಿಧ್ಯ ದಾಖಲೆ ವರದಿ ಹಿತ್ಲಳ್ಳಿ, ಬನವಾಸಿ ಕಾನು ಸಮೀಕ್ಷೆ, ಸಸಿಸಂತೆ, ಸಿಗಂದೂರು ವನ ನಿರ್ಮಾಣ, 70,000 ಎಕರೆ ಎಮ್.ಪಿ.ಎಮ್ ಭೂಮಿ ಹಿಂಪಡೆಯಿರಿ, ದಾಂಡೇಲಿ ಅಭಯಾರಣ್ಯದಲ್ಲಿ ಪುನರ್ ವಸತಿ ಪ್ಯಾಕೇಜ್ ಮೊತ್ತ ಹೆಚ್ಚಿಸಿ, ಅರಣ್ಯ ಅಧಿಕಾರಿಗಳ ಜೊತೆ ಸಂವಾದ, ಅಘನಾಶಿನಿ ತಿರುವು ವಿರೋಧ, ಅರಣ್ಯ ಅತಿಕ್ರಮಣ ನಿಲ್ಲಿಸಿ ಅಭಿಯಾನ, ಕಳಸ ಅರಣ್ಯನಾಶ ವಿರುದ್ಧ ಹೋರಾಟ ಡೀಮ್ಟ ಅರಣ್ಯ ಉಳಿಸಿ ಅಭಿಯಾನ, ಸಿ.ಆರ್.ಜಡ್ ಉಲ್ಲಂಘನ ತಡೆಯಿರಿ, ಕೇಂದ್ರ ಪರಿಸರ ಸಚಿವರ ಭೇಟಿ, ಜನಪದ ವೈಧ್ಯರ ಸಮಾವೇಶ, ಇತ್ಯಾದಿ ನಡೆದಿವೆ.

ಹೋರಾಟಕ್ಕೆ ಸಹಾಯ ಮಾಡಿದ ಅಧ್ಯಯನಗಳು: ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ಅಧ್ಯಯನ ಕೇಂದ್ರ, ಪಶ್ಚಿಮಘಟ್ಟ ಕಾರ್ಯಪಡೆ, ರಾಜ್ಯ ಜೀವ ವೈವಿಧ್ಯ ಮಂಡಳಿ, ವೃಕ್ಷಲಕ್ಷ ಆಂದೋಲನ, ಅರಣ್ಯ ಕಾಲೇಜು ಮುಂತಾದ ಸಂಸ್ಥೆಗಳು ಘಟ್ಟದ ಅರಣ್ಯಗಳ ಅಧ್ಯಯನ ನಡೆಸಿವೆ. ಉ.ಕ ಜಿಲ್ಲಾ ಪರಿಸರ ಧಾರಣ ಸಾಮಥ್ರ್ಯ ಅಧ್ಯಯನ ಜಿಲ್ಲೆಯ ಅರಣ್ಯ ನಾಶೀ ಯೋಜನೆ ನಡೆಯಲು ಸಹಾಯ ಮಾಡಿದೆ. ಬಿಸಗೋಡ ಗಣಿ ದುಷ್ಪರಿಣಾಮ ಕುರಿತ ಅಧ್ಯಯನ ಶಾಶ್ವತವಾಗಿ ಕಾಳಿ ಕಣಿವೆಯಲ್ಲಿ ಭಾರೀ ಗಣಿಗಾರಿಕೆ ತಡೆಯಲಯ ಬೆಂಬಲ ನೀಡಿದೆ. 1999 ರಿಂದ ಈವರೆಗೆ ಶಿವಮೊಗ್ಗಾ. ಉ.ಕ ಜಿಲ್ಲೆಗಳ ನೂರಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿದ್ಯಾರ್ಥಿ-ಯುವಕ, ಯುವತಿಯರು, ನಾಟಿ ವೈದ್ಯರು ಎಲ್ಲ ಸೇರಿ ನಡೆಸಿದ ಗ್ರಾಮ ಜೀವನ ವೈವಿಧ್ಯ ದಾಖಲಾತಿ ನಡೆಸಿರುವ ಸಂಗತಿ ಬಹುದೊಡ್ಡ ಜನ ಜಾಗೃತಿಗೆ ಅವಕಾಶ ಕಲ್ಪಿಸಿತು.
ಶಿವಮೊಗ್ಗಾ ಜಿಲ್ಲೆಯ ಕಾನು, ದೇವರ ಕಾಡುಗಳ ಅಧ್ಯಯನ ವರದಿಗಳು ಸಾವಿರಾರು ಎಕರೆ ಕಾನು ಸಂರಕ್ಷಣ ಆಂದೋಲನವನ್ನು ಬಲಪಡಿಸಿದೆ. ಅಂಬಾರಗುಡ್ಡ, ಕುಮಾರಧಾರಾ ನದೀ ಪರಿಸರ ಅಧ್ಯಯನ, ಶಾಲ್ಮಲಾ ನದೀ ಅಧ್ಯಯನಗಳು ಹೊರಾಟಗಳಿಗೆ ಶಕ್ತಿ ತುಂಬಿವೆ. ವರದಾ ಜಲಾನಯನ ಅಧ್ಯಯನ ಅಲ್ಲಿನ ನೀರಿನ ಲಭ್ಯತೆಯ ಮೇಲೆ ಬೆಳಕು ಚೆಲ್ಲಿದೆ.

ನದೀ ಮೂಲಗಳ ಉಳಿವಿಗಾಗಿ: ಪಶ್ಚಿಮ ಘಟ್ಟದ ನದೀ ಕಣಿವೆಗಳು ಹೊಳೆ ಹಳ್ಳಗಳತ್ತ ನಾಡಿನ ಜನತೆಯ ಲಕ್ಷ್ಯ ಸೆಳೆಯುವ ಉದ್ದೇಶದಿಂದ ನದೀಮೂಲ ಉಳಿಸಿ ಅಭಿಯಾನವನ್ನು 2011-12 ರಲ್ಲಿ ನಡೆಸಿದೆವು. ಪಶ್ಚಿಮಘಟ್ಟದಲ್ಲಿ ಹುಟ್ಟಿ ಹರಿಯವ 22 ಪ್ರಮುಖ ನದಿಗಳ ಮೂಲಗಳಲ್ಲಿ 180 ಉಪನದಿಗಳ ಬುಡದಲ್ಲಿ ಜಾಗೃತಿ ಅಭಿಯಾನ ನಡೆಸಿದೆವು. ಅಷ್ಟು ವ್ಯಾಪಕವಾಗಿ ನಡೆಸಲು ಪಶ್ಚಿಮಘಟ್ಟ ಕಾರ್ಯಪಡೆ ಮೂಲಕ ಅವಕಾಶ ಅಭ್ಯವಾಗಿತ್ತು. ಮೊದಲ ಬಾರಿಗೆ ನದೀ ಗುಂಟ ಪಾದಯಾತ್ರೆ, ಸಮೀಕ್ಷೆ, ಜಾಥಾ, ಸರ್ಕಾರದ ಉನ್ನತ ಅಧಿಕಾರಿಗಳ ಇಲಾಖೆಗಳ ಜೊತೆ ಜನಪ್ರತಿನಿಧಿಗಳು, ಸಂಸ್ಥೆಗಳ ಜೊತೆ ಸಮಾಲೋಚನೆ, ನದೀ ಮಾಲಿನ್ಯ ತಡೆಗೆ ವಿಶೇಷ ಪ್ರಯತ್ನ ಇವೆಲ್ಲ ನಡೆದವು.
ಶರಾವತಿ ನದಿ ಉಳಿಸಿ ಎಂದರೆ ನದಿಗೆ ಸೇರುವ ನೂರಾರು ಹಳ್ಳ-ಹೊಳೆಗಳು ಕಣಿವೆಗಳು, ಕೆರೆ, ತೊರೆ, ಜಡ್ಡಿಗಳನ್ನು ರಕ್ಷಣೆ ಮಾಡಬೇಕು ಎಂಬ ಸಂದೇಶ ನೀಡಲು ಸಾಧ್ಯವಾಯಿತು. ಲಕ್ಷ್ಮಣತೀರ್ಥ ಕಾವೇರಿಯ ಉಪನದಿ, ಹುಣಸೂರು ಬಳಿ ಇರುವ ಈ ನದಿ ಪೂರ್ಣ ಮಲಿನವಾಗಿದೆ. ಇದನ್ನು ತಡೆಗಟ್ಟಲು ಜಂಟಿ ಪ್ರಯತ್ನ ಶುರು ಆಗಿತ್ತು. ಭದ್ರಾವತಿ, ಕೊಲ್ಲೂರು, ದಾಂಡೇಲಿ, ಮಲಪ್ರಭಾ ಮೂಲ, ತುಂಗಾ, ಭದ್ರಾ, ಕುಮಾರಧಾರಾ ಮುಂತಾದ ನದಿಗಳ ಉಗಮ ಸ್ಥಳಗಳಲ್ಲಿ ನಡೆಸಿದ ಅಭಿಯಾನ ಸಾರ್ಥಕತೆ ಕಂಡಿತು. ಆ ಸಂಧರ್ಭದಲ್ಲಿ ತಲಕಾವೇರಿ ಬುಡಕ್ಕೆ ಹೋದರೆ ಕೆಲವು ಹಿತಾಸಕ್ತಿಗಳು ನಮ್ಮ ಅಭಿಯಾನಕ್ಕೆ ಅಡ್ಡಿ ಮಾಡಿದ್ದರು ಎಂಬ ಸಂಗತಿಯನ್ನು ಇಲ್ಲಿ ಹೇಳಲೇಬೇಕು.
ಹೊಗ್ರೇ ಕಾನುಗಿರಿ ತೀರ್ಥ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಹೊಳೆ ಹುಟ್ಟುವ ಸ್ಥಳವಿದು. ಇಲ್ಲಿಗೆ ಗಣಿಗಾರಿಕೆಗೆ ಬಂದ ಖಾಸಗಿ ಕಂಪನಿಯನ್ನು ಹೋರಾಟದ ಮೂಲಕ ಓಡಿಸಿದ್ದಾಯಿತು. (2006 ರಲಿ) ಸೂಕ್ಷ್ಮ ಪ್ರದೇಶವನ್ನು ನೈಸರ್ಗಿಕ ಪಾರಂಪರಿಕ ತಾಣ ಎಂದು ಸರ್ಕಾರ ಘೋಷಣೆ ಮಾಡಿತು(2010 ರಲ್ಲಿ)ವರದಾ ನದಿಯ ಮೂಲ ಸಾಗರದ ಸಮೀಪ ಇದೆ. ದಟ್ಟ ಕಾಡು ನಾಶವಾಗುವ ಸ್ಥಿತಿ, ವರದಾ ಮೂಲ ಬತ್ತುವ ಸ್ಥಿತಿಗೆ ಬಂದಾಗ ಅಲ್ಲಿ ಗ್ರಾಮ ಅರಣ್ಯ ಸಮಿತಿ ರಚಿಸಿದೆವು. ಸುತ್ತಲಿನ ಕಾನುಗಳಿಗೆ ದೇವರಕಾಡು ಎಂಬ ಪಟ್ಟ ಕಟ್ಟಿದೆವು. ಸಾವಿರ ಎಕರೆ ವರದೆಯ ಕಾಡು ರಕ್ಷಣೆ ಸಾಧ್ಯವಾಯಿತು.
ಅಘನಾಶಿನಿ ನದಿ ಹಲವು ಜಲಪಾತಗಳ, ಜಲ ಸಮೃದ್ಧಿಯ ನದಿ, ಹಲವು ವಿನಾಶದ ಸಂಕಷ್ಟ ಎದುರಿಸಿದೆ. ಬೃಹತ್ ಜಲವಿದ್ಯುತ ಯೋಜನೆ, 8 ಮಿನಿ ಹೈಡಲ್ ಆಣೆಕಟ್ಟುಗಳು, ನದಿ ಸಮುದ್ರ ಸೇರುವ ಸ್ಥಳದಲ್ಲಿ ಉಷ್ಣ ವಿದ್ಯುತ ಸ್ಥಾವರ, ಹೀಗೆ ವಿನಾಶಕಾರೀ ಬೃಹತ್ ಯೋಜನೆಗಳ ವಿರುದ್ಧದ ಹೋರಾಟದಲ್ಲಿ ಯಶ ಪಡೆದೆವು. ಶರಾವತಿ ಮೂಲದ ಬಳಿ ಗಣಿಗಾರಿಕೆ, ಕೊಡಚಾದ್ರಿ ಬಳಿ, ತುಂಗಾ ಭದ್ರಾ ಮೂಲಗಳ ಬಳಿ ಕುದುರೆಮುಖದಲ್ಲಿ ಬೃಹತ್ ಗಣಿಗಾರಿಕೆ ಜನಾಂದೋಲನಗಳಿಂದಲೇ ನಿಂತಿದೆ.

ಬೇಡ್ತಿ ನದೀ ಕಣಿವೆ ಸಂರಕ್ಷಣೆಯ ಯಶೋಗಾಥೆ: ಈಗ ಬೇಡ್ತಿ ನದಿಯ ಪರಿಸ್ಥಿತಿ ನೋಡೋಣ. ಬೇಡ್ತಿ ನದಿ ಹುಟ್ಟಿದ್ದು ಧಾರವಾಡದಲ್ಲಿ, ಎದ್ದು ಕಾಣುವದು ಯಲ್ಲಾಪುರದಲ್ಲಿ, ಮಾಗೋಡು ಜಲಪಾತದ ನಂತರ ಗಂಗಾವಳಿ ಎನಿಸಿಕೊಂಡು ಅಂಕೋಲೆಯ ಮಂಜಗುಣಿ ಎಂಬಲ್ಲಿ ಸಮುದ್ರ ಸೇರುವ ಈ ನದಿ 1978-79 ರ ನಂತರ ಸದಾ ಸುದ್ದಿಯಲ್ಲಿದೆ. 1980 ರ ದಶಕದ ಆದಿಯಲ್ಲೇ ಬೃಹತ್ ಆಣೆಕಟ್ಟುಗಳ ವಿರುದ್ಧ ದೇಶದಲ್ಲಿ ಮೊಟ್ಟಮೊದಲು ಚಿಂತನೆಗೆ ಹಚ್ಚಿದ್ದು ಬೇಡ್ತಿ ನದಿ. ಡಾ|| ಶಿವರಾಮ ಕಾರಂತರು, ಡಾ|| ಮಾಧವ ಗಾಡ್ಗೀಳರಂಥ ಗಣ್ಯರು ಪಾಲ್ಗೊಂಡ ಶಿರಸಿ ರಾಷ್ಟ್ರೀಯ ವಿಚಾರ ಸಂಕಿರಣ ರಾಜ್ಯದಲ್ಲಿ ಮೊದಲ ಪರಿಸರ ಚಳುವಳಿಗೆ ನಾಂದಿ ಹಾಡಿತು. ಪುನಃ 1990ರ ದಶಕದಲ್ಲಿ ಪೂಜ್ಯ ಸ್ವರ್ಣವಲ್ಲೀ ಸ್ವಾಮೀಜಿ ಅವರ ಬೇಡ್ತಿ ಪಾದಯಾತ್ರೆ ದೇಶದ ಗಮನ ಸೆಳೆಯಿತು. ಪೂಜ್ಯ ಗಂಗಾಧರೇಂದ್ರರು ಹಸಿರು ಸ್ವಾಮೀಜಿ ಎನಿಸಿಕೊಂಡರು. ಪಶ್ಚಿಮ ಘಟ್ಟ ಉಳಿಸಿ ಜನಾಂದೋಲನಕ್ಕೆ ಇದರಿಂದ ಬಲ ಬಂತು. ಕಿರುವತ್ತಿ ಬಳಿ ಕರಿಯವ್ವನ ಗುಂಡಿಯಲ್ಲಿ ಗೌಳಿ ವನವಾಸಿಗಳ ಜೊತೆ ಸೇರಿ ನಡೆಸಿದ “ಬೇಡ್ತಿ ತಿರುವು” ವಿರುದ್ಧದ ಚಳುವಳಿ ಅವಿಸ್ಮರಣೀಯ (1998).
ನಂತರ ಬಂದ ಮಿನಿ ಹೈಡೆಲ್ ಡ್ಯಾಂ ಸರಮಾಲೆ, ಬೇಡ್ತಿ, ವರದಾ ನದೀ ಜೋಡಣೆ ಯೋಜನೆ 2001 ರಲ್ಲಿ ಪ್ರಸ್ತಾಪ, ಅಲ್ಲಿಂದ ಆರಂಭವಾದ ನದೀ ತಿರುವು ಯೋಜನೆಗಳ ಕುರಿತ ಪ್ರತಿಭಟನೆ ನಡೆದೇ ಇದೆ! ನೆನಪಿಡಿ, ಬೇಡ್ತಿ-ಅಘನಾಶಿನಿ ಕಣಿವೆ ಉಳಿಸಿ ಆಂದೋಲನ ನಿರಂತರವಾಗಿದೆ, ಜಾಗೃತವಾಗಿದೆ.
ಶಾಲ್ಮಲಾ, ಬೇಡ್ತಿ-ಅಘನಾಶಿನಿ ಕಣಿವೆ ಉಳಿಸಲು ಶಾಶ್ವತ ಪ್ರಯತ್ನಬೇಕೆಂಬ ಪರಿಸರ ತಜ್ಞರ ಅಭಿಪ್ರಾಯದಂತೆ ವನ್ಯಜೀವಿ ಕಾಯಿದೆ ಅಡಿಯಲ್ಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ಸರ್ಕಾರ ಆದೇಶ ಹೊರಡಿಸಿತು (2011-12) ನದಿಗಳ ಮಧ್ಯೆ ಸಾವಿರ ಜನರ ಸಮಾವೇಶ ನಡೆಸಿದ ಹೆಗ್ಗಳಿಕೆ ನಮ್ಮದು. ಇವುಗಳಲ್ಲಿ ಸಹಸ್ರಲಿಂಗದಿಂದ ಗಣೇಶಪಾಲ್‍ವರೆಗೆ ಬೇಡ್ತಿ ಉಪನದಿ ಶಾಲ್ಮಲಾವನ್ನು ಶಾಲ್ಮಲಾ ನದೀ ಅಂಚಿನ ಪರಿಸರ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದ್ದು ನಮ್ಮ ದೇಶದಲ್ಲಿ ಮೊದಲನೇಯದು. ಇದರಿಂದ ಇಲ್ಲಿ ಬೃಹತ್ ಅಣೆಕಟ್ಟು, ಗಣಿಗಾರಿಕೆ ನಿರ್ಮಿಸಲು ಸಾಧ್ಯವಿಲ್ಲ. ಆದರೆ ಜನರ, ರೈತರ ನದಿ ಬಳಕೆಗೆ ಏನೂ ತೊಂದರೆ ಇಲ್ಲ!
ಬೇಡ್ತಿ ನದಿಯ ಉಳಿವಿಗೆ ಇಷ್ಟೆಲ್ಲಾ ಹೋರಾಟ ನಡೆಯುವ ಹೊತ್ತಿಗೆ ಶಾಂತವಾಗಿ, ರಚನಾತ್ಮಕವಾಗಿ ಗ್ರಾಮಜನ ಸಹಭಾಗಿತ್ವದ ಹಸಿರು, ಜಲಸಮೃದ್ಧಿಯ ಕಾರ್ಯ ಚಟುವಟಿಕೆಗಳ ನಿರಂತರ ಅಭಿಯಾನವೇ ನಡೆದಿರುವುದು ಈಗ ಇತಿಹಾಸ. ಔಷದೀ ಮಾಲಿಕೆಗಳ ಬಗ್ಗೆ ಜಾಗೃತಿ, ನಾಟಿವೈದ್ಯರ ಜ್ಞಾನ ಪಡೆದುಕೊಳ್ಳುವಿಕೆ, ವೃಕ್ಷಾರೋಪಣ, ಮುಂಡಿಗೆಜಡ್ಡಿ, ರಾಂಪತ್ರೆ ಜಡ್ಡಿ ಸಂರಕ್ಷಣಾ ಕಾರ್ಯಗಳು ನಡೆದವು. ಕಾಡಿನ ಜೇನು ಉಳಿಸಿ, ಬಿಸಗೋಡ ಗಣಿಗಾರಿಕೆ ನಿಲ್ಲಿಸಿ, ವನವಾಸಿಗಳ ವಿಕಾಸ ಹೀಗೆ ಹಲವು ಮುಖಗಳಲ್ಲಿ ಅಧ್ಯಯನ, ಜಾಗೃತಿ, ಅಭಿವೃದ್ಧಿ ಕಾರ್ಯಗಳು ಈ ಪ್ರದೇಶದಲ್ಲಿ ನಡೆದವು. ಇತ್ತೀಚೆಗೆ 2018 ರ ನವೆಂಬರ 15 ರಿಂದ ಬೇಡ್ತಿ ನದೀ ಮೂಲವಾದ ಧಾರವಾಡದ ಶಾಲ್ಮಲಾ ತೀರ್ಥದಲ್ಲಿ ನದೀ ಮೂಲ ಉಳಿಸಿ ಅಭಿಯಾನ ಆರಂಭವಾಗಿದೆ

ಮುಂದಿನ ಸವಾಲುಗಳು: ಪಶ್ಚಿಮ ಘಟ್ಟದ ನದೀ ಕಣಿವೆಗಳ ಉಳಿವಿಗೆ ಬೃಹತ್ ಜನಾಂದೋಲನವೇ ನಡೆಯಬೇಕಾಗಿದೆ. 5 ಲಕ್ಷ ಹೆಕ್ಟೇರ್ ಡೀಮ್ಡ ಅರಣ್ಯ ಉಳಿಸಲು ಹೋರಾಟ ನಡೆಯಬೇಕಿದೆ. ಹೊಳೆ, ಹಳ್ಳ, ಕೆರೆ, ನದಿಗಳಲ್ಲಿ ಅಕ್ರಮ ಮರಳು ತೆಗೆಯುವ ದಂಧೆಗೆ ಕಡಿವಾಣ ಹಾಕಬೇಕಿದೆ. ಗ್ರಾಮ ಅರಣ್ಯ ಸಮಿತಿಗಳಿಗೆ ಬಲ ನೀಡಬೇಕಿದೆ. ಅರಣ್ಯ, ಜೀವವೈವಿಧ್ಯ ಕಾಯಿದೆ, ವನ್ಯ ಜೀವಿ ಕಾಯಿದೆಗಳು ಸಡಿಲಗೊಳ್ಳದಂತೆ ಒತ್ತಡ ಹಾಕಬೇಕಿದೆ. ಘಟ್ಟದಲ್ಲಿ ನದೀ ತಿರುವು ಯೋಜನೆಗಳನ್ನು, ಮಿನಿ ಹೈಡಲ್ ಡ್ಯಾಂಗಳನ್ನು ಕೈಬಿಡಿ ಎಂದು ಪುನಃ ಒತ್ತಾಯ ಮಾಡಲೇ ಬೇಕಿದೆ. ಡಾ||ಕಸ್ತೂರಿ ರಂಗನ್ ವರದಿ ಜಾರಿಗೆ ಬರಬೇಕು. ಪಶ್ಚಿಮಘಟ್ಟದ ಅರಣ್ಯ ನಿರ್ವಹಣೆ ಕುರಿತಂತೆ ಪಶ್ಚಿಮಘಟ್ಟ ಕಾರ್ಯಪಡೆ 2013 ರಲ್ಲಿ ರಾಜ್ಯ ಸರ್ಕಾರಕ್ಕೆ ನೀಡಿದ ವಿವರ ಶಿಫಾರಸ್ಸುಗಳು ಜಾರಿಗೆ ಬರಬೇಕು ಎಂದು ಒತ್ತಡ ಹಾಕಬೇಕಿದೆ.
ರಾಷ್ಟ್ರೀಯ ಕೆರೆ ಸಮ್ಮೇಳನದ ಮೂಲಕ ಜಲಮೂಲಗಳ ಉಳಿವಿನ ಸಂದೇಶ ಯುವಜನತೆಗೆ ತಲುಪಿಸುವ ಕಾರ್ಯಕ್ಕೆ ಶುಭ ಕೋರುತ್ತೇನೆ. ಡಾ|| ಮೋಹನ ಆಳ್ವಾ ಹಾಗೂ ಡಾ|| ಟಿ.ವಿ.ರಾಮಚಂದ್ರ ತಂಡದವರನ್ನು ಅಭಿನಂದಿಸೋಣ. ಸಸ್ಯ ಶ್ಯಾಮಲಾಂ, ವಂದೇ ಮಾತರಂ ಎನ್ನೋಣ.

Back

 

 

E-mail    |    Sahyadri    |    ENVIS    |    GRASS    |    Energy    |      CES      |      CST      |    CiSTUP    |      IISc      |    E-mail